ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಅತೀ ಹೆಚ್ಚು ನೀರು ಬಳಕೆಯಾಗುತ್ತಿರುವ ಹಿನ್ನೆಲೆ ಇಲಾಖೆಯೇ ನೀರು ಶುದ್ಧೀಕರಣ ಘಟಕ ತೆರೆದಿದೆ. ನಿತ್ಯ ಸುಮಾರು 168 ರೈಲುಗಳು ಓಡಾಟ ನಡೆಸುತ್ತವೆ. 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ರೈಲ್ವೆ ಸೇವೆ ಬಳಸುತ್ತಾರೆ. ಇನ್ನು ರೈಲ್ವೆ ಸ್ವಚ್ಛತೆ - ಶೌಚಾಲಯ ಸೇರಿದಂತೆ ಹಲವು ಕೆಲಸಕ್ಕೆ ಸದ್ಯ ನಿಲ್ದಾಣಕ್ಕೆ 40 ಲಕ್ಷ ನೀರನ್ನು ನೀರು ಸರಬರಾಜು ಮಂಡಳಿಯಿಂದ ಪಡೆಯುತ್ತಿದೆ.
ಹೀಗಾಗಿ ಬಳಿಸಿದ ತ್ಯಾಜ್ಯ ನೀರನ್ನು ಒಳಚರಂಡಿ ಹರಿಸಲಾಗುತ್ತಿದ್ದು, ಇದನ್ನು ಮರು ಬಳಕೆ ಮಾಡುವ ಉದ್ದೇಶದಿಂದ ತ್ಯಾಜ್ಯ ನೀರು ಶುದ್ದೀಕರಣ ಘಟಕವನ್ನು ರೈಲ್ವೆ ಇಲಾಖೆ
ನಿರ್ಮಿಸಿದೆ.
ಬೆಂಗಳೂರು ರೈಲ್ವೆ ನಿಲ್ದಾಣದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿದ್ದು, 5 ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಇದಾಗಿದೆ. ಸುಮಾರು 1.81 ಕೋಟಿ ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. 2003ರಲ್ಲಿ ಸ್ಥಾಪಿಸಿದ್ದ 8 ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ಪಡೆಯುವ ನೀರನ್ನು ಸದ್ಯ ಬೋಗಿ, ಶೌಚಗೃಹ ಸ್ವಚ್ಚತೆ ಸೇರಿದಂತೆ ಇತರ ಕೆಲಸಕ್ಕೆ ಬಳಸಲಾಗುತ್ತಿದೆ.
ಆದರೆ, ನಿಲ್ದಾಣದ ವಿಶ್ರಾಂತಿ ಕೊಠಡಿ, ಅಡುಗೆ ಕೆಲಸಕ್ಕೆ, ಅಧಿಕಾರಿಗಳ ಕಚೇರಿ, ಟ್ರೈನಿಂಗ್ ಸೆಂಟರ್ ಸೇರಿದಂತೆ ಹಲವು ಭಾಗದಲ್ಲಿ ಉತ್ಪತ್ತಿಯಾಗುತ್ತಿದ್ದ ತ್ಯಾಜ್ಯ ನೀರು ನೇರ ಚರಂಡಿ ಸೇರುತ್ತಿತ್ತು. ಹೀಗಾಗಿ ಇದನ್ನು ತಪ್ಪಿಸಲು ಸದ್ಯ ಈ ನೂತನ ಘಟಕವನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಜಲಮಂಡಳಿಗೆ ಪಾವತಿಸುವ ನೀರಿನ ಶುಲ್ಕವೂ ಕಡಿಮೆ ಆಗಲಿದೆ.