ಬೆಂಗಳೂರು: ಕೊರೊನಾ ಸೋಂಕನ್ನು ತಡೆಗಟ್ಟಲು ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ತಮ್ಮ ಸುರಕ್ಷತೆಗಾಗಿ ಹೊಲೆಯುತ್ತಿದ್ದ ಮಾಸ್ಕ್ಗಳಿಗೆ ಈಗ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಪರಿಣಾಮವಾಗಿ ಜೈಲಿನ ಕೈದಿಗಳ ಸುರಕ್ಷತೆಗೆ ಒಂದಿಷ್ಟು ಮಾಸ್ಕ್ ಸಾಕು ಎಂದು ಪ್ರಾರಂಭಿಸಿದ ಕೈಗಳಿಂದ ಎರಡೇ ವಾರದಲ್ಲಿ ಮೂವತ್ತು ಸಾವಿರ ಮಾಸ್ಕ್ ತಯಾರಿಯಾಗಿವೆ.
![demand for mask prepared by prisoners](https://etvbharatimages.akamaized.net/etvbharat/prod-images/kn-bng-03-mask-7204498_08042020125609_0804f_1586330769_703.jpg)
ಅರವತ್ತು ಕೈದಿಗಳಿಂದ ಮಾಸ್ಕ್ ತಯಾರಿಕೆಯ ಕಾರ್ಯ ನಡೆಯುತ್ತಿದ್ದು, ಸದ್ಯ ಹದಿನೈದು ಸಾವಿರ ಮಾಸ್ಕ್ ತಯಾರಿಸಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಉಚಿತವಾಗಿ ನೀಡಿದ್ದಾರೆ.
ಮಾಸ್ಕ್ ಗುಣಮಟ್ಟ ನೋಡಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಮತ್ತು ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಮಾಸ್ಕ್‌ಗೆ ಬೇಡಿಕೆ ಇಟ್ಟಿದ್ದಾರೆ. ಗುಣಮಟ್ಟವಿಲ್ಲದ ಮಾಸ್ಕ್ಗಳಿಗೆ ಹೊರಗಡೆ ಹೆಚ್ಚು ಬೆಲೆ ಇದ್ದು, ಮಾಸ್ಕ್ಗಳು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಹೀಗಾಗಿ ಜೈಲಿನ ಕೈದಿಗಳು ತಯಾರಿಸಿದ ಮಾಸ್ಕ್ಗಳಿಗೆ ಸರ್ಕಾರದ ವಿವಿಧ ಇಲಾಖೆಗಳು ಬೇಡಿಕೆ ಇಟ್ಟಿವೆ.
ಇದನ್ನೇ ಉದ್ದಿಮೆಯಾಗಿ ಬಳಸಿಕೊಂಡ ಜೈಲಿನ ಅಧಿಕಾರಿಗಳು ಒಂದು ಮಾಸ್ಕ್‌ಗೆ 6 ರೂಪಾಯಿ ಬೆಲೆ ನಿಗದಿ ಮಾಡಿ, ಇದರಿಂದ ಬಂದ ಹಣದಲ್ಲಿ ಕೈದಿಗಳಿಗೆ ಕೂಲಿ ನಿಗದಿ ಮಾಡಿದ್ದಾರೆ. ಉಳಿದ ಹಣವನ್ನು ಜೈಲಿನ ಅಗತ್ಯ ಸೇವೆಗೆ ಬಳಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.