ಬೆಂಗಳೂರು: ರಾಜ್ಯದ ಯೋಜನೆಗಳು ಹಾಗೂ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಕೈಗೊಳ್ಳಲಾಗಿದ್ದ ದೆಹಲಿ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿಗೆ ಮರಳುವ ಮೊದಲು ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಅವರು ತಕ್ಷಣ ರಾಜ್ಯಸಭೆಗೆ ಹೋಗಬೇಕಾಗಿತ್ತು. ಹಾಗಾಗಿ ಕೆಲವೇ ನಿಮಿಷಗಳ ಕಾಲ ಭೇಟಿ ಮಾಡಲು ಸಾಧ್ಯವಾಯಿತು. ಅವರಿಂದ ಸಲಹೆಗಳನ್ನು ಪಡೆದು ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಕೊಟ್ಟು ಬಂದಿದ್ದೇನೆ. ಮುಂದಿನ ಬಾರಿ ಬಂದಾಗ ಒಂದು ಅರ್ಧ ಗಂಟೆ ಕುಳಿತು ಚರ್ಚೆ ಮಾಡಬೇಕೆಂಬ ಅಪೇಕ್ಷೆ ಮೋದಿಯವರದ್ದಾಗಿದ್ದು, ನನ್ನದು ಕೂಡ ಇದೇ ಅಪೇಕ್ಷೆಯಾಗಿದೆ. ಹಾಗಾಗಿ ಮುಂದಿನ ಭೇಟಿ ಸುದೀರ್ಘವಾಗಿರಲಿದೆ ಎಂದರು.
ಈ ಬಾರಿ ನನ್ನ ದೆಹಲಿ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ. ಪ್ರಧಾನಿ ಸೇರಿದಂತೆ ಎಲ್ಲಾ ಸಚಿವರು, ನಮ್ಮ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಏನೇನು ಬೇಡಿಕೆಗಳನ್ನು ಇಟ್ಟಿದ್ದೆವೋ ಬಹುತೇಕ ಎಲ್ಲದಕ್ಕೂ ಒಪ್ಪಿಗೆ ಕೊಡುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ನಿನ್ನೆ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ಅವರು ಪ್ರಧಾನಿ ಜೊತೆ ಮಾತನಾಡಿ ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾದೆ. ಇಂದೇ ಅವರು ಸೂಚನೆ ಕೊಡಬಹುದು. ಯಾವ ರೀತಿ ಸಂಪುಟ ವಿಸ್ತರಣೆ ಮಾಡಬೇಕು, ಏನು ಮಾಡಬೇಕು ಎಂದು ಅವರ ಸೂಚನೆಯನ್ನು ಆಧರಿಸಿ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ. ಎಷ್ಟು ಜನ ಸಂಪುಟಕ್ಕೆ ಸೇರ್ಪಡೆಯಾಗಬೇಕು ಎನ್ನುವುದು ಹೈಕಮಾಂಡ್ ತೀರ್ಮಾನದ ಆಧಾರದಲ್ಲಿದೆ. ಆದ್ರೆ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ ಎಂದರು.