ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಅಧ್ಯಕ್ಷರು, ಕಾರ್ಯಧ್ಯಕ್ಷರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಸಾಕಷ್ಟು ಮಂದಿ ಆಕಾಂಕ್ಷಿಗಳು ಬಹು ದಿನಗಳಿಂದ ಖಾಲಿ ಉಳಿದಿರುವ ಕೆಪಿಸಿಸಿ ವಿವಿಧ ಸಮಿತಿಗೆ ತಮ್ಮನ್ನು ನೇಮಿಸುವಂತೆ ಪ್ರತಿ ದಿನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಐವರು ಕಾರ್ಯಾಧ್ಯಕ್ಷರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಒತ್ತಡ ಹೇರುತ್ತಿರುವ ಆಕಾಂಕ್ಷಿಗಳಿಗೆ ಏನು ಉತ್ತರ ನೀಡಬೇಕೆನ್ನುವುದು ಅರಿಯದೆ ಕಾರ್ಯಾಧ್ಯಕ್ಷರು ಡಿಕೆಶಿ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಪಕ್ಷದಲ್ಲಿನ ಆಂತರಿಕ ಗೊಂದಲ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಾಯಕರಿಗೆ ಸಮಿತಿ ರಚನೆಯಿಂದ ಇನ್ನಷ್ಟು ಭಿನ್ನಾಭಿಪ್ರಾಯ ಹೆಚ್ಚಾಗಬಹುದು ಎಂಬ ಆತಂಕ ಇದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಸಮಾನ ಸಂಖ್ಯೆಯಲ್ಲಿ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವಿಚಾರ ಬಂದಾಗ ಶಿವಕುಮಾರ್ ಅಂತಿಮವಾದರೂ ಸಿದ್ದರಾಮಯ್ಯನವರನ್ನು ಮೀರಿ ಮುಂದುವರಿಯುವಂತಿಲ್ಲ.
ವಿವಿಧ ಜಿಲ್ಲಾ ಅಧ್ಯಕ್ಷರ ಬದಲಾವಣೆ ಆಗಬೇಕಿದೆ. ಮಾಜಿ ಸಚಿವರು, ಪರಾಜಿತ ಶಾಸಕರು ಈ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮಾಜಿ ಸಂಸದರು ಕೂಡ ಪೈಪೋಟಿಗೆ ಇಳಿದಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಎಲ್ಲರಿಗೂ ಆಯಕಟ್ಟಿನ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ. ಸಿಕ್ಕ ಕಡೆ ಹೆಚ್ಚಿನವರ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಒಂದೆರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಹಾಗೂ ನೇಮಕದ ಪ್ರಯತ್ನವನ್ನು ಡಿಕೆಶಿ ಮಾಡಿ ನೋಡಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರಿಸುಮಾರು ಒಂದೂವರೆ ವರ್ಷದ ನಂತರ ಎದುರಾಗುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂದರ್ಭ ಒಮ್ಮತ ಮೂಡಬೇಕು, ಪ್ರಚಾರ, ಚುನಾವಣೆಯಲ್ಲಿ ಗೆಲುವು ಸಾಧಿಸಲು ತಳ ಮಟ್ಟದ ನಾಯಕರ ವಿಶ್ವಾಸ ಗಳಿಸಲೇಬೇಕು. ಅವರಿಗೆ ಕೊಟ್ಟರೆ ಇವರಿಗೆ ಬೇಸರ, ಇವರಿಗೆ ಕೊಟ್ಟರೆ ಅವರಿಗೆ ಬೇಸರ ಎನ್ನುವಂತೆ ಆಗಬಾರದು ಎಂಬ ಕಾರಣಕ್ಕೆ ಸಮಿತಿಗೆ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಹೈಕಮಾಂಡ್ ಸಮ್ಮತಿ:
ಈಗಾಗಲೇ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ಕೆಲ ತಿಂಗಳ ಹಿಂದೆಯೇ ಸಮ್ಮತಿ ಸೂಚಿಸಿದೆ. ಆದರೆ ಇಲ್ಲಿನ ಒತ್ತಡ ಕಂಡು ಸುಮ್ಮನಿರುವ ಸ್ಥಿತಿ ಎದುರಾಗಿದೆ. ಒಂದೆಡೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವಧಿ ಕೂಡ ಮುಗಿಯುತ್ತಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಇವರನ್ನು ನೇಮಿಸಿದ್ದರು.
ಇನ್ನು, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರನ್ನು ನೇಮಿಸಿದ ನಂತರ ಎದುರಾಗುತ್ತಿರುವ ಕಿತ್ತಾಟ, ವಿರೋಧಿ ಹೋರಾಟಗಳನ್ನು ಗಮನಿಸಿದಾಗ ಹೊಸ ನೇಮಕಗಳಿಂದ ಮತ್ತಷ್ಟು ಗೊಂದಲ ಉಂಟಾಹಬಹುದು ಎನ್ನಲಾಗಿದೆ. ಹಾಗಾಗಿ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಯಾವುದೇ ಪದಾಧಿಕಾರಿಗಳನ್ನು ನೇಮಿಸಲು ಡಿಕೆಶಿ ಹಿಂದೇಟು ಹಾಕುತ್ತಿದ್ದಾರೆ. ಆದರೆ ಹೈಕಮಾಂಡ್ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರ ಸಹಕಾರದೊಂದಿಗೆ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಆಗಲಿದೆ ಎನ್ನುವ ನಿರೀಕ್ಷೆ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರದ್ದಾಗಿದೆ.