ಬೆಂಗಳೂರು : ಆಡಳಿತ ಯಂತ್ರದ ಸಮರ್ಪಕ ನಿರ್ವಹಣೆಗೆ ದಕ್ಷ, ಸಮರ್ಥ ಮಾನವ ಸಂಪನ್ಮೂಲವನ್ನು ನಿರಂತರ ಪೂರೈಕೆ ಮಾಡಬೇಕಿರುವುದು ಕೆಪಿಎಸ್‌ಸಿ ಸಂಸ್ಥೆ. ಆದರೆ, ಇದರ ನಿಷ್ಕ್ರಿಯ ಆಡಳಿತದಿಂದ ಸರ್ಕಾರಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ಕೆಪಿಎಸ್‌ಸಿ ಸಂಸ್ಥೆಯ ಬಾಗಿಲು ತಟ್ಟಿ ಮಾಹಿತಿ ಕೇಳುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ಮಂಗಳವಾರ ಕೆಪಿಎಸ್‌ಸಿ ಕಚೇರಿಯ ಬಾಗಿಲುತಟ್ಟುವ ಮೂಲಕ ಪ್ರತಿಭಟಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2021ರ ಫೆಬ್ರವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ ಎಂದು ಕಿಡಿಕಾರಿದರು.
ತಾವು ಸಚಿವರಾಗಿದ್ದ ಸಂದರ್ಭದಲ್ಲಿಯೂ ಹಲವು ಉದ್ಯೋಗಾಂಕ್ಷಿಗಳಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದು, ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ ನಿರ್ವಹಣೆಗೆ ಪ್ರತಿಕೂಲವಾಗಿರುವುದು ದುರಾದೃಷ್ಟಕರ. ಯುಪಿಎಸ್ಸಿ ಮಾದರಿಯಲ್ಲಿ ಸಂಸ್ಥೆ ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ಏಕೆ ಸಾಧ್ಯವಿಲ್ಲ?.
ಕೆಪಿಎಸ್‌ಸಿ ಕಳೆದ ಹಲವು ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳೆಷ್ಟು? ಎಷ್ಟು ಫಲಿತಾಂಶ ನೀಡಲಾಗಿದೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ? ವಿಳಂಬ ಧೋರಣೆಗೆ ಕಾರಣ ಏನು? ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕ್ರಿಯಾಯೋಜನೆ ಏನು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಸವಣ್ಣ ಕುರಿತ ತಿರುಚಿದ ಪಠ್ಯ ಸರಿಪಡಿಸದಿದ್ದರೆ ಹೋರಾಟ: ಶಿವಾಚಾರ್ಯ ಶ್ರೀ
ಪ್ರಮುಖವಾಗಿ ಆಡಳಿತ ಮತ್ತು ಆಯೋಗದ ನಡುವೆ ಸಮನ್ವಯತೆ ಇಲ್ಲದಿರುವುದು ಕಂಡು ಬಂದಿದೆ. ಈ ವಿಚಾರದ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುವುದಾಗಿ ಸುರೇಶ್ ಕುಮಾರ್ ಹೇಳಿದರು. ಸದ್ಯ ನಾಳೆಯ ಒಳಗಾಗಿ ವಿವಿಧ ನೇಮಕ ಪ್ರಕ್ರಿಯೆಗಳ ಸ್ಟೇಟಸ್ ಅನ್ನು ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತಾರೆ ಎಂದು ತಿಳಿಸಿದರು.
ಇನ್ನೂ ಕೆಪಿಎಸ್‌ಸಿ 106 ಕೆಎಎಸ್ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯನ್ನು ಫೆಬ್ರುವರಿ-2021ರಂದು ನಡೆಸಿದೆ. ಅದರ ಫಲಿತಾಂಶ ಜೂನ್ ತಿಂಗಳ ಕೊನೆ ಒಳಗೆ ನೀಡುವುದಾಗಿ ಹೇಳಿದ್ದಾರೆ ಎಂದು ಸಚಿವರು ಹೇಳಿದರು.