ಬೆಂಗಳೂರು: ಹೇಮಾವತಿ ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಗೋಪಾಲಯ್ಯ ತಿಳಿಸಿದರು.
ನಿನ್ನೆ ವಿಕಾಸಸೌಧದ ಸಲಹಾ ಸಮಿತಿಯ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಹಾಸನ, ತುಮಕೂರು, ಮಂಡ್ಯ ಜಿಲ್ಲೆಗಳಿಗೆ ನೀರು ಬಿಡುವುದನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಕಾಲುವೆಗಳಿಂದ ಹೂಳೆತ್ತುವ ಕಾಮಗಾರಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಈಗಾಗಲೇ ಸಾಕಷ್ಟು ನೀರು ಬಿಡಲಾಗಿದೆ. ಯಾವ ಜಿಲ್ಲೆಗಳಿಗೆ ಎಷ್ಟು ಹಂಚಿಕೆಯಾಗಿತ್ತು ಅಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅದನ್ನು ಸರಿದೂಗಿಸಿ ನೀರು ಬಿಡುಗಡೆ ನಿಲ್ಲಿಸಲು ತೀರ್ಮಾನಿಸಲಾಗಿದೆ. ಇನ್ನು ಎಡ್ಮೂರು ದಿನಗಳಲ್ಲಿ ಹೇಮಾವತಿ ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಲಾಗುತ್ತದೆ. ಜಲಾಶಯದಲ್ಲಿ 10.4 ಟಿಎಂಸಿ ನೀರನ್ನು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ: ತುಮಕೂರಿಗೆ ಎಷ್ಟು ನೀರು ಬಿಡಲಾಗಿದೆ, ಅದರ ಲೆಕ್ಕ ಕೊಡಿ ಎಂದು ಮಾಧುಸ್ವಾಮಿ ಅಧಿಕಾರಿಗಳನ್ನು ಪ್ರಶ್ನಿಸಿದರು. ನಮಗೆ ಬೇಕಿರುವ ನೀರು ಏಕೆ ಕೊಡುತ್ತಿಲ್ಲ. ನೀರು ವ್ಯರ್ಥ ಮಾಡುವುದು ಬೇಡ. ತುರುವೇಕೆರೆಯಲ್ಲಿ ನೀರು ವ್ಯರ್ಥವಾಗುತ್ತಿದೆ. ವ್ಯರ್ಥ ನೀರಿನಿಂದ ಅಲ್ಲಿನ ಕೆರೆ ತುಂಬಿಸಬಹುದು. ಅಧಿಕಾರಿಗಳು ಆ ಕೆಲಸವನ್ನು ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಸಂಸದ ಡಿ.ಕೆ. ಸುರೇಶ್ ತರಾಟೆ:
ಇದೇ ವೇಳೆ ಸಂಸದ ಡಿ.ಕೆ. ಸುರೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತುಮಕೂರಿಗೆ 24 ಟಿಎಂಸಿ ಕೊಟ್ಟಿದ್ದೀರ ಅನ್ನುತ್ತಿದ್ದೀರಾ, ಕುಣಿಗಲ್ಗೆ ಎಷ್ಟು ನೀರು ಹರಿದಿದೆ ಎಂದು ತಿಳಿಸಿ. ಕುಣಿಗಲ್ಗೆ ಅರ್ಧ ಟಿಎಂಸಿ ನೀರು ಕೊಟ್ಟಿದ್ದೀರ. ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟು ದಾರಿ ತಪ್ಪಿಸುತ್ತಿದ್ದೀರಾ ಎಂದು ಗರಂ ಆದರು.
ಈ ಸುದ್ದಿಯನ್ನೂ ಓದಿ: ಲಾಲ್‌ಬಾಗ್‌ನಲ್ಲಿ ಜ.14ರ ವರೆಗೆ ಸರಳ 'ಸಂಕ್ರಾಂತಿ ಮೇಳ'
ಇದಕ್ಕೆ ಉತ್ತರಿಸಿದ ಕಾವೇರಿ ನೀರಾವರಿ ನಿಗಮ ಎಂಡಿ ಕೆ. ಜಯಪ್ರಕಾಶ್, ಕುಣಿಗಲ್ ದೊಡ್ಡಕೆರೆಗೆ ಒಂದೂವರೆ ಟಿಎಂಸಿ, ಮಾರ್ಕೋಂಡನಹಳ್ಳಿಗೆ ಒಂದೂವರೆ ಟಿಎಂಸಿ ನೀರು ಬಿಡಲಾಗಿದೆ ಎಂದರು.