ಬೆಂಗಳೂರು: ಬಜೆಟ್ ಅಧಿವೇಶನವನ್ನು ಜು. 21ರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕಲಾಪ ಸಲಹಾ ಸಮಿತಿ ಸಭೆಯ ನಿರ್ಧಾರವನ್ನು ಸ್ಪೀಕರ್ ವಿಧಾನಸಭೆ ಕಲಾಪದಲ್ಲಿ ಪ್ರಕಟಿಸಿದರು. ಜು.4 ಮತ್ತು ಜು.5ರಂದು ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಗುರುವಾರ ಉತ್ತರ ನೀಡಲಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.
ಜುಲೈ 7 ರಂದು ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡಲಿದ್ದಾರೆ. ಜುಲೈ 5ಕ್ಕೆ ವಿಧೇಯಕಗಳನ್ನು ಮಂಡನೆ ಮಾಡಲಾಗುತ್ತದೆ. ಜುಲೈ 10 - 19 ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ನಡೆಯಲಿದೆ. ಜುಲೈ 20-21ಕ್ಕೆ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ. ಹಾಗೂ ಧನಿವಿನಿಯೋಗ ವಿಧೇಯಕಕ್ಕೆ ಅನುಮೋದನೆ ನೀಡಲಾಗುವುದು. ಬಜೆಟ್ ಚರ್ಚೆ ಮೇಲಿನ ಉತ್ತರಕ್ಕೆ ಕಾಲಾವಕಾಶ ಕಡಿಮೆ ಇದೆ ಎಂಬ ಕಾರಣಕ್ಕೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮುಂಚೆ ಜುಲೈ 14ರ ವರೆಗೆ ಅಧಿವೇಶನ ನಿಗದಿಯಾಗಿತ್ತು. ಇದೀಗ ಒಂದು ವಾರಗಳ ಕಾಲ ಕಲಾಪವನ್ನು ವಿಸ್ತರಿಸಲಾಗಿದೆ.
ಸದನದಲ್ಲಿ ಮುಂದುವರಿದ ಬಿಜೆಪಿ ಧರಣಿ: ಮಧ್ಯಾಹ್ನದ ಬಳಿಕವೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಧರಣಿ ಮಧ್ಯೆಯೇ ಗಮನ ಸೆಳೆಯುವ ಸೂಚನೆಯನ್ನು ಮಂಡಿಸಲಾಯಿತು. ಈ ವೇಳೆ, ಮಾಜಿ ಸಿಎಂ ಬೊಮ್ಮಾಯಿ ಆತ್ಮ ಸಾಕ್ಷಿಯಾಗಿ ನಡೆದುಕೊಳ್ಳಿ, ಪರಂಪರೆಯನ್ನು ಉಳಿಸಿ, ಕರ್ನಾಟಕ ವಿಧಾನಸಭೆಯ ಪರಂಪರೆ ನಿಮ್ಮ ಕೈಯಿಂದ ಹಾಳು ಮಾಡುತ್ತಿದ್ದೀರಿ ಎಂಬ ಕೆಟ್ಟ ಹೆಸರು ಪಡೆಯಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರು ಸ್ಪೀಕರ್ ಒನ್ ಸೈಡ್, ಸ್ಪೀಕರ್ ಒನ್ ಸೈಡ್ ಎಂದು ಘೋಷಣೆ ಕೂಗಿದರು. ಸ್ಪೀಕರ್ ಕಾಂಗ್ರೆಸ್ ಸೈಡ್ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಒಂದು ಸೈಡ್ ಸದನ ನಡೆಸಿಕೊಂಡು ಹೋಗುತ್ತೀರಾ. ಮುಂದಿನ ಐದು ವರ್ಷ ಹೀಗೆ ಮಾಡುತ್ತೀರಾ? ಎಂದು ಆರ್.ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನಾನು ಯಾರ ಸೈಡೂ ಇಲ್ಲ. ನಿಯಮಾನುಸಾರ ನಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ಬಳಿಕ ಸದನವನ್ನು ನಾಳೆ ಬೆಳಗ್ಗೆ 10.30ಗೆ ಮುಂದೂಡಲಾಯಿತು.
ಟೋಲ್ ಸಿಬ್ಬಂದಿ ಗೂಂಡಾಗಿರಿ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಬಿಡದಿ ವಂಡರ್ ಲಾ ಬಳಿಯಿರುವ ಟೋಲ್‌ನ ಸಿಬ್ಬಂದಿ ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ಉದ್ಧಟತನದಿಂದ ವರ್ತಿಸುತ್ತಿರುವ ಬಗ್ಗೆ ಮತ್ತು ರಾಜ್ಯದಲ್ಲಿನ ಎಲ್ಲಾ ಟೋಲ್‌ಗಳಲ್ಲಿ ಶಾಸಕರ ಪಾಸ್‌ಗಳನ್ನು ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೈಸೇಷನ್ ಮಾಡುವ ಬಗ್ಗೆ ಹಾಗೂ ಶಾಸಕರಿಗೆ ಪ್ರತ್ಯೇಕ ಲೇನ್ ಮಾಡುವ ಬಗ್ಗೆ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ ಲೋಕೋಪಯೋಗಿ ಸಚಿವರ ಗಮನ ಸೆಳೆದರು.
ಟೋಲ್ನಲ್ಲಿ ಶಾಸಕರ ಪಾಸ್ ಇದ್ದರೂ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಖಾಸಗಿಯವರಿಗೆ ಟೋಲ್ ಸಂಗ್ರಹ ಜವಾಬ್ದಾರಿ ಕೊಡುತ್ತಿದ್ದಾರೆ. ಅವರು ಗೂಂಡಾಗಿರಿ ವರ್ತನೆ ತೋರಿಸುತ್ತಾರೆ. ಶಾಸಕರಿಗೇ ಇಂಥ ವರ್ತನೆ ತೋರಿದರೆ, ಜನಸಾಮಾನ್ಯರ ಬಳಿ ಯಾವ ರೀತಿ ವರ್ತಿಸುತ್ತಾರೆ? ಎಂದು ಪ್ರಶ್ನಿಸಿದರು. ನಾನು ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ, ಸ್ಪೀಕರ್ ಹಕ್ಕು ಚ್ಯುತಿ ಮಂಡನೆ ಅರ್ಜಿ ಕೊಡುವಂತೆ ಸ್ಪೀಕರ್ ಸೂಚಿಸಿದರು.
ಅತಿಥಿ ಉಪನ್ಯಾಸಕರ ಸೇವೆ ಖಾಯಂ ಪ್ರಸ್ತಾಪ ಇಲ್ಲ: ಕೈ ಶಾಸಕ ಕೆ.ವೈ. ನಂಜೇಗೌಡ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಲವು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಸೇವಾ ಹಿರಿತನ ಪರಿಗಣಿಸಿ, ಸೇವಾ ಭದ್ರತೆ, ವೇತನ ಏರಿಕೆ ಹಾಗೂ ಖಾಯಂಗೊಳಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮುಗಿಯದ ಬಿಜೆಪಿ ಗದ್ದಲ; ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ