ಬೆಂಗಳೂರು: ಸಿಎಂ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಲು ತೀರ್ಮಾನಿಸಲಾಗಿದೆ.
ಉನ್ನತ ಮಟ್ಟದ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಕೋವಿಡ್-19 ಹಿನ್ನೆಲೆ ಈ ಬಾರಿಯ ದಸರಾ ಸರಳವಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ. ಸಂಪ್ರದಾಯ ಬಿಡದೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಚಾಮುಂಡಿ ಬೆಟ್ಟ, ಅರಮನೆಗೆ ಸೀಮಿತವಾಗಿ ದಸರಾ ನಡೆಸಲಾಗುತ್ತದೆ. ಹೆಚ್ಚು ಜನಸಂದಣಿ ಸೇರದ ರೀತಿ ದಸರಾ ಆಚರಣೆ ಮಾಡುತ್ತೇವೆ ಎಂದರು.
ಜಂಬೂ ಸವಾರಿ ಅರಮನೆಯ ಆವರಣದೊಳಗೆ ಸೀಮಿತವಾಗಿ ನಡೆಯುತ್ತದೆ. ಜಂಬೂ ಸವಾರಿಗೆ 5 ಆನೆ ಮಾತ್ರ ಬಳಕೆ ಮಾಡಲಾಗುತ್ತದೆ. ಈ ಬಾರಿ 5 ಜನ ಕೊರೊನಾ ವಾರಿಯರ್ಗಳಿಂದ ದಸರಾ ಉದ್ಘಾಟಿಸಲು ಚಿಂತನೆ ಇದೆ. ವೈದ್ಯರು, ನರ್ಸ್, ಪೊಲೀಸ್, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಂದ ಉದ್ಘಾಟಿಸಲು ಯೋಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಯುವ ದಸರಾ, ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಮಹಿಳಾ ಮೇಳ, ಯೋಗ ದಸರಾ, ರೈತ ದಸರಾ, ಕ್ರೀಡಾಕೂಟ, ಕವಿಗೋಷ್ಠಿ ಇರುವುದಿಲ್ಲ. ಕುಸ್ತಿ ಪಂದ್ಯ ಸಂಪ್ರದಾಯಕ್ಕೆ ಅನುಗುಣವಾಗಿ ಇರಲಿದೆ. ಹಾಸ್ಯೋತ್ಸವ ಇರೋದಿಲ್ಲ. ಮನೆ ಮನೆ ದಸರಾ ಮನೆಯಲ್ಲಿ ಆಚರಣೆ ಮಾಡಿಕೊಳ್ಳಬಹುದು. ಯಾವುದೇ ಕಾರ್ಯಕ್ರಮ ಇರುವುದಿಲ್ಲ.
ಚಾಮುಂಡಿ ಬೆಟ್ಟದಲ್ಲಿ ನಡೆಯುವ ಸಂಪ್ರದಾಯಿಕ ಕಾರ್ಯಕ್ರಮಗಳು, ಅರಮನೆ ಸಾಂಪ್ರದಾಯಿಕ ಕಾರ್ಯಕ್ರಮ ಮಾತ್ರ ಈ ಬಾರಿ ಇರಲಿವೆ. ಅದು ಬಿಟ್ಟು ಇನ್ನೇನೂ ಇರೋದಿಲ್ಲ. ಕೆಲ ಕಾರ್ಯಕ್ರಮ ರೆಕಾರ್ಡ್ ಮಾಡಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವಂತೆ ಸಲಹೆ ಬಂದಿದೆ. ಹೀಗಾಗಿ ಮೈಸೂರು ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಸದ್ಯಕ್ಕೆ 5 ಜನ ಕೊರೊನಾ ವಾರಿಯರ್ಗಳಿಂದ ಉದ್ಘಾಟಿಸಲು ಯೋಚಿಸಲಾಗಿದೆ. ಮತ್ತೆ ಯಾರನ್ನಾದ್ರು ಸೇರಿಸಬೇಕಾ ಎಂದು ಮೈಸೂರು ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸಿಎಂ 10 ಕೋಟಿ ರೂ., ಮೂಡಾದಿಂದ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
2002-03ರಲ್ಲಿ ಈ ರೀತಿ ಸರಳ ದಸರಾ ಆಗಿತ್ತಂತೆ. ಈಗ ಮತ್ತೆ ಈ ಬಾರಿ ಸರಳ ದಸರಾ ನಡೆಯುತ್ತಿದೆ. ಸರಳ ಸಂಪ್ರದಾಯಕ್ಕೆ ಅವಶ್ಯಕವಾದ ಅನುದಾನ ಸರ್ಕಾರ ಬಿಡುಗಡೆ ಮಾಡುತ್ತದೆ. ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಇರಲಿದೆ. ಅದು ಬಿಟ್ಟು ಕೇವಲ ಚಾಮುಂಡಿ ಬೆಟ್ಟ ಮತ್ತು ಅರಮನೆಗೆ ಮಾತ್ರ ಈ ಬಾರಿ ದಸರಾ ಸೀಮಿತವಾಗಿರಲಿದೆ ಎಂದು ವಿವರಿಸಿದರು.
ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಪರಿಕಲ್ಪನೆಯಂತೆ ಚೀನಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು. ದೇಸಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕೆಂದು ಸಿಎಂ ಸೂಚಿಸಿದರು.