ಬೆಂಗಳೂರು: ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳ ಪಾಲು ನೀಡಲು ನಿರಾಕರಿಸುವುದು ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧವಾಗಲಿದೆ. ಆದ್ದರಿಂದ ಮೃತ ಹೆಣ್ಣಮಕ್ಕಳಿಗೂ ಸಮಾನ ಪಾಲು ನೀಡಬೇಕು ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ದಾಯದಿಗಳಾಗಿರುವ ಹೆಣ್ಣು ಮಕ್ಕಳಿಗೆ ಪಾಲು ನೀಡುವಂತೆ ಗದಗ ನ್ಯಾಯಾಲಯದ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನರಗುಂದ ತಾಲೂಕಿನ ಚನ್ನಬಸಪ್ಪ ಹೊಸಮನಿ ಎಂಬುವರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಮ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಹಿಂದೂ ಉತ್ತರಾಧಿಕಾರ ಕಾಯಿದೆ 2005 ತಿದ್ದುಪಡಿಗೂ ಮುನ್ನ ಮೃತಪಟ್ಟಿರುವ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ವಾರಸುದಾರರಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲಿರಲಿದೆ ಎಂದು ಪೀಠ ತಿಳಿಸಿದೆ. ಕಾಯಿದೆಗೂ ಮುನ್ನ ಮೃತಪಟ್ಟ ಮಗನಿಗೆ ಆಸ್ತಿಯ ಹಕ್ಕುಗಳು ಉಳಿದಿಕೊಂಡಿವೆ ಎನ್ನುವುದಾದರೆ ಮಗಳಿಗೂ ಅದು ಅನ್ವಯವಾಗುತ್ತದೆ. ಮೊದಲೇ ನಿಧನರಾದ ಮಗಳು-ಮಗನ ನಡುವೆ ಯಾವುದೇ ತಾರತಮ್ಯ ಮಾಡಲು ಅವಕಾಶವಿಲ್ಲ. ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ತಾರತಮ್ಯ ಮಾಡುವುದು ಭಾರತದ ಸಂವಿಧಾನದ ಸಮಾನತೆ ತತ್ವಗಳಿಗೆ ವಿರುದ್ಧವಾಗಲಿದ್ದು, ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ನೀಡಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ನ್ಯಾಯಾಲಯಗಳು ಕಾನೂನಿನಲ್ಲಿ ಮಧ್ಯಪ್ರವೇಶ ಮಾಡುವುದು ಮತ್ತು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಮಾನತೆಯ ಮೂಲ ತತ್ವಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಲಿಂಗ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಬೇಕಾಗುತ್ತದೆ. ಕಾನೂನಿನಲ್ಲಿ ಈ ರೀತಿಯಲ್ಲಿ ಮಧ್ಯಪ್ರವೇಶ ಮಾಡುವುದರಿಂದ ಕುಟುಂಬದ ಆಸ್ತಿಯ ಹಕ್ಕುಗಳಲ್ಲಿ ಲಿಂಗ ತಾರತಮ್ಯವಿಲ್ಲದೆ ಸಮಾನವಾಗಿ ಹಂಚಿಕೊಳ್ಳಲು ಅವಕಾಶ ನೀಡಿದಂತಾಗಲಿದೆ. ಒಂದು ವೇಳೆ 2005ರ ತಿದ್ದುಪಡಿ ಅಡಿಯಲ್ಲಿ ಮೊದಲೇ ಸಾವನ್ನಪ್ಪಿದ ಮಗಳಿಗೆ ಪಿತ್ರಾರ್ಜಿತ ಹಕ್ಕುಗಳನ್ನು ನಿರಾಕರಿಸಿದಲ್ಲಿ ಇತಿಹಾಸದಲ್ಲಿ ನಡೆಯುತ್ತಿರುವ ಲಿಂಗ ತಾರತಮ್ಯವನ್ನು ಶಾಶ್ವತವಾಗಿ ಮುಂದುವರೆಸಿದಂತಾಗಲಿದೆ. ಅಲ್ಲದೆ, ಕಾಯಿದೆಗಳ ತಿದ್ದುಪಡಿಗಳಿಂದ ಮಹಿಳೆಯರು ತಮ್ಮ ಹಕ್ಕುಗಳಿಂದ ವಂಚಿತರಾಗುವುದಿಲ್ಲ. ಆದ್ದರಿಂದ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಪೀಠ ಹೇಳಿದೆ.
ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕಾಯಿದೆಯ ಸೆಕ್ಷನ್ 6ರ ಪ್ರಕಾರ ಹೆಣ್ಣು ಮಗಳು ಯಾವ ಸಂದರ್ಭದಲ್ಲಿ ಸಾವನ್ನಪ್ಪಿದರು ಎಂಬುದು ಮುಖ್ಯವಾಗುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲುದಾರರಾಗಿದ್ದು, ಲಿಂಗ ಸಮಾನತೆಯನ್ನು ಒತ್ತಿಹೇಳಿದೆ. ಈ ಆದೇಶ ಪೂರ್ವಾನ್ವಯವಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಜನ್ಮದಿಂದ ಬಂದಿರುವುದೇ ವಿನಾ ಉತ್ತರಾಧಿಕಾರದಿಂದ ಬರುವುದಿಲ್ಲ. ಅವರು ಜೀವಂತವಾಗಿದ್ದಾರೆ ಇಲ್ಲವೇ ಎನ್ನುವುದು ಅಪ್ರಸ್ತುತ. ಆದ್ದರಿಂದ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲುದಾರರಾಗಿರುತ್ತಾರೆ. 2005ರಲ್ಲಿ ಹೆಣ್ಣು ಮಗಳು ಕಾನೂನು ಬದ್ಧ ವಾರಸುದಾರರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪೀಠ ತಿಳಿಸಿದೆ.
ಕಾಯಿದೆಯ ಸೆಕ್ಷನ್ 6(1)(ಎ) ಪ್ರಕಾರ ಗಂಡು ಮಗುವಿನಂತೆ ಹೆಣ್ಣು ಮಗಳನ್ನೂ ಸೇರಿಸಲಾಗಿದೆ. ಅದರಂತೆ 2005ರ ತಿದ್ದುಪಡಿಗೆ ಅನುಗುಣವಾಗಿ ಹೆಣ್ಣು ಮಕ್ಕಳನ್ನು ಪಾಲುದಾರಿಕೆಯಿಂದ ಕೈಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಏನು? ದಾಯಾದಿಗಳಾದ ಮೃತ ನಾಗವ್ವ ಮತ್ತು ಸಂಗವ್ವ ಎಂಬುವರಿಗೆ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು (ಮೃತರ ವಾರಸುದಾರರಿಗೆ) ನೀಡುವಂತೆ ಗದಗದ ಪ್ರಧಾನ ಸಿವಿಲ್ ನ್ಯಾಯಾಧೀಶರು 2023ರ ಅಕ್ಟೋಬರ್ 3 ರಂದು ನೀಡಿದ್ದ ಆದೇಶ ಪ್ರಶ್ನಿಸಿ ಅರ್ಜಿದಾರ ಚನ್ನಬಸಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯಿದೆ 2005ಕ್ಕೂ ಮುನ್ನ ಸಂಗವ್ವ, ನಾಗವ್ವ ಸಾವನ್ನಪ್ಪಿದ್ದಾರೆ. ಅವರಿಗೆ ಆಸ್ತಿಯಲ್ಲಿ ಭಾಗ ನೀಡಲು ಅವಕಾಶವಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ತಿದ್ದುಪಡಿ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಅಪರಾಧಿಗೆ ಜೀವ ಇರುವವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ಕೋರ್ಟ್