ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಅಸಹಜ ಸಾವನ್ನಪ್ಪಿರುವ ಕೈದಿಗಳ ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಮುಂದಿನ ಎರಡು ವಾರಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರಾಧಿಕಾರ ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾರಾಗೃಹಗಳಲ್ಲಿ ಕೈದಿಗಳು ಅಸಹಜ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣಗಳ ಸಂಬಂಧ ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ರಾಜ್ಯ ಕಾರಾಗೃಹಗಳಲ್ಲಿ 2017ರ ಸೆ.15ರಿಂದ 2019ರ ಮೇ ಅಂತ್ಯದವರೆಗೆ ನಡೆದಿರುವ ಪ್ರತಿಯೊಬ್ಬ ಕೈದಿಯ ಅಸಹಜ ಸಾವಿಗೆ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 163(ಎ) ಅಡಿ ಪ್ರತ್ಯೇಕವಾಗಿ ಮಧ್ಯಂತರ ಪರಿಹಾರ ನಿಗದಿಪಡಿಸಿ ಮೃತರ ಕುಟುಂಬಕ್ಕೆ ನೀಡಬೇಕು. ಅದರ ವಿತರಣೆಯಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಜಿಲ್ಲಾಧಿಕಾರಿಯ ಪ್ರಾಧಿಕಾರ ರಚಿಸಿ ಎಂದು ಪೀಠ ಆದೇಶಿಸಿದೆ.
ಪ್ರತಿ ಜಿಲ್ಲಾಧಿಕಾರಿ ತನ್ನ ಜಿಲ್ಲೆಯ ಕಾರಾಗೃಹ ಅಧೀಕ್ಷಕರಿಂದ ಕೈದಿಗಳ ಅಸಹಜ ಸಾವು ಪ್ರಕರಣಗಳ ವಿವರ ಪಡೆದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ಪರಿಹಾರ ನಿಗದಿಪಡಿಸಬೇಕು. ಮೃತ ಕೈದಿಯ ಕುಟುಂಬದದಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾದ ನಂತರ ಪೊಲೀಸರಿಂದ ಅಗತ್ಯ ಮಾಹಿತಿ ಪಡೆದು, ಅರ್ಜಿದಾರರು ಪರಿಹಾರ ಪಡೆಯಲು ಅರ್ಹರೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ನೆರವು ಪಡೆದುಕೊಳ್ಳಬಹುದು. ಎಲ್ಲ ದಾಖಲೆ ಪರಿಶೀಲಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು. ಈ ಕುರಿತು ಕ್ರಮ ಕೈಗೊಂಡ ವರದಿಯನ್ನು ಸರ್ಕಾರ ಮುಂದಿನ ಆರು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.