ಬೆಂಗಳೂರು: ಜಯದೇವ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಆತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆಯ ಟೇಬಲ್, ಕುರ್ಚಿಗಳನ್ನು ಬೀಸಾಸಿ ಗಾಜುಗಳನ್ನು ಪುಡಿ-ಪುಡಿ ಮಾಡಿದ್ದಾರೆ.
ಇಂದು ಸಂಜೆ ಆಸ್ಪತ್ರೆಯ ವಾರ್ಡ್ ಟೇಬಲ್, ಕುರ್ಚಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬಳಿಕ ಆವರಣದಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ಬೀಳಿಸಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ. ಡಿಜಿ ಹಳ್ಳಿ ನಿವಾಸಿಯಾಗಿದ್ದ ಅನ್ವರ್ ಪಾಷ ಎಂಬುವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಈ ಹಿಂದೆ ಹಲವು ಬಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿದ್ದರಂತೆ.
ಅನ್ವರ್ ಪಾಷ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಮನೆಯವರು ಜಯದೇವ ಆಸ್ಪತ್ರೆಯಲ್ಲಿ ಕರೆ ತಂದಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅನ್ವರ್ ಪಾಷಾ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಅನ್ವರ್ ಪಾಷಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ರೋಗಿ ಕುಟುಂಬಸ್ಥರು ದಾಂಧಲೆ ನಡೆಸಿದ್ದಾರೆ. ಘಟನೆ ಸಂಬಂಧ ಎರಡು ಕಡೆಯವರು ಯಾವುದೇ ದೂರು ನೀಡಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಲಕ್ ನಗರ ಪೊಲೀಸರು ತಿಳಿಸಿದ್ದಾರೆ.