ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓಯೋ ಲಾಡ್ಜ್ನಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸಿದ್ದಾಪುರ ನಿವಾಸಿ ಕಮಲಾ ಶವವಾಗಿ ಪತ್ತೆಯಾದ ಮಹಿಳೆ.
ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಕಮಲಾ, ಓಬಳೇಶ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಕಳೆದ ನ. 24ರಂದು ಕಮಲಾ ನಾಪತ್ತೆಯಾಗಿದ್ದರು. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪತಿ ಓಬಳೇಶ್ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.
ಪೊಲೀಸ್ ತನಿಖೆ ವೇಳೆ ಕಮಲಾ, ದಿಲೀಪ್ ಎಂಬಾತನ ಜೊತೆ ನ. 24ರಂದು ಹೊರ ಹೋಗಿರುವ ವಿಚಾರ ತಿಳಿದು ಬಂದಿದೆ. ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯ ಅರ್ಚನಾ ಕಂಫರ್ಟ್ಸ್ ಲಾಡ್ಜ್ನ ರೂಂನಲ್ಲಿ ವಾಸನೆ ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ನ. 24ರಂದು ಕಮಲಾ ಹಾಗೂ ದಿಲೀಪ್ ಇಬ್ಬರು ಇದೇ ಕೋಣೆಯೊಳಗೆ ತೆರಳಿದ್ದ ವಿಚಾರ ಬೆಳಕಿಗೆ ಬಂದಿದೆ. ಆದರೆ ವಾಪಸ್ ತೆರಳುವಾಗ ದಿಲೀಪ್ ಮಾತ್ರ ಹೊರಗಡೆ ತೆರಳಿದ್ದು ಅನುಮಾನಕ್ಕೆ ಕಾರಣವಾಗಿದೆ.
ಕೋಣೆಯ ಬಾಗಿಲು ತೆರೆದು ನೋಡಿದಾಗ ಕಮಲಾ ಶವ ಕೊಳೆತಹೋಗಿದ್ದು, ಫ್ಯಾನ್ಗೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ. ತಲೆಮರೆಸಿಕೊಂಡ ಆರೋಪಿ ದಿಲೀಪ್ಗಾಗಿ ಶೋಧ ಕಾರ್ಯ ಮುಂದುವರೆದಿದೆ.