ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆ ಸದ್ಯದ ಮಟ್ಟಿಗೆ ಉಳ್ಳವರು ಧವಸ ಧಾನ್ಯಗಳನ್ನು ಖರೀದಿಸಿದ್ರೆ, ನಿರ್ಗತಿಕರು, ದಿನಗೂಲಿ ನೌಕರರು ಒಂದೊತ್ತಿನ ಊಟಕ್ಕೂ ಪರದಾಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕರ್ತವ್ಯದ ಮಧ್ಯೆಯೂ ನಗರದಲ್ಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ನಗರದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರು ನಿರ್ಗತಿಕರಿಗೆ ಅಕ್ಕಿ, ಬೇಳೆ, ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ಪಿಎಸ್ಐ ಹಾಗೂ ಪಿಸಿಗಳ ಮುಖಾಂತರ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಪೊಲೀಸರ ಹೃದಯವಂತಿಕೆಗೆ ನಿರ್ಗತಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ವತಃ ಪೊಲೀಸರೇ ಅಡುಗೆ ತಯಾರಿಸಿ, ಭಿಕ್ಷಾಟನೆ ಮಾಡುವ ಮಕ್ಕಳಿಗೆ, ಬೀದಿ ವ್ಯಾಪಾರಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ವಿತರಿಸಿದ್ದಾರೆ. ಅಲ್ಲದೆ ಮಾಸ್ಕ್ ಖರೀದಿಸಲು ಸಾಧ್ಯವಾಗದವರಿಗೆ ಮಾಸ್ಕ್ ನ ವ್ಯವಸ್ಥೆ ಮಾಡಿದ್ದಾರೆ. ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶದಂತೆ ಜನರಿಗೆ ಬೇಕಾದ ದಿನಸಿ ಖರೀದಿಗೆ ಬೆಳಗ್ಗೆ ಎರಡು ತಾಸುಗಳ ಕಾಲ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬೀದಿ ಬದಿ ತರಕಾರಿ ಮಾರಾಟ ಮಾಡುವಾಗ ಒಂದು ಅಡಿ ಅಂತರ ಕಾಯ್ದುಕೊಳ್ಳುವಂತೆ ದಕ್ಷಿಣ ವಿಭಾಗದಲ್ಲಿ ಜನರಿಗೆ ಪೊಲೀಸರು ಸಲಹೆ ಸಹ ನೀಡಿದ್ದಾರೆ.