ಬೆಂಗಳೂರು: ರಾಜಕೀಯ ಮುತ್ಸದ್ದಿಗಳಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ವಿರೋಧಿಸುವ ಭರದಲ್ಲಿ ಅಂತಹ ಮಾತುಗಳನ್ನಾಡಿದ್ದು ಸರಿಯೇ? ನಿಮ್ಮಂತಹ ಹಿರಿಯರು ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಡಿಸಿಎಂ ಲಕ್ಷ್ಮಣ ಸವದಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
![dcm savadi twitter](https://etvbharatimages.akamaized.net/etvbharat/prod-images/kn-bng-12-dcm-savadi-tweet-script-7208080_22102020234129_2210f_1603390289_962.jpg)
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ, ಕಿರಿಯರಿಗೆ ಮಾರ್ಗದರ್ಶನ ಮಾಡಬೇಕಾದ ನೀವು, ಇದೆಂತಹ ಉದಾಹರಣೆ ನೀಡುತ್ತಿದ್ದೀರಿ? ಚುನಾವಣೆ, ಸೋಲು ಗೆಲುವಿನ ಆಚೆಯು ನಿಮ್ಮನ್ನು ಮಾದರಿ ಎಂದು ಅನುಸರಿಸುವ ಜನರಿಗೆ ಆ ಜವಾಬ್ದಾರಿಗೆ ವಿಪರೀತವಾದ ಮಾತುಗಳನ್ನಾಡುವುದು ಸರಿಯೇ ಎಂದು ಸವದಿ ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಬೆಂಕಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. ಗೌರವವನ್ನು ಮರೆತು ಲೇವಡಿ ಅಪಹಾಸ್ಯಗಳ ಮಾತುಗಳನ್ನಾಡಿದ್ದು ಖಂಡನೀಯ. ನಿಮ್ಮ ಅನುಭವ, ಹಿರಿತನಕ್ಕೆ ತಕ್ಕುದಾಗಿ ನಡೆದುಕೊಳ್ಳಿ. ನಿಮ್ಮಿಂದ ಒಳ್ಳೆಯದನ್ನೇ ನಿರೀಕ್ಷಿಸುತ್ತೇವೆ ಹೊರತು ಇಂತಹ ನಡವಳಿಕೆಯನ್ನಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಡಿಸಿಎಂ ಖಂಡಿಸಿದರು.