ಬೆಂಗಳೂರು: ಬಿಡಿಎ ಸಂಸ್ಥೆಗೆ ಕರಪ್ಷನ್ ಕಳಂಕ ಮೆತ್ತುಕೊಂಡಿದೆ ಈ ಹಣೆಪಟ್ಟಿಯಿಂದ ಸಂಸ್ಥೆಯನ್ನು ಹೊರತರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬಿಡಿಎ ಅಧಿಕಾರಿಗಳ ಸಭೆಯಲ್ಲಿಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಯಾವುದೇ ಡಿನೋಟಿಫಿಕೇಷನ್ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೇವಲ ನೋಟಿಫಿಕೇಶನ್ ಹೊರಡಿಸಿದರೆ ಸಾಲದು, ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಬೇಕು. ಸಂಚಾರ ದಟ್ಟಣೆ ಕಡಿಮೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಬೇಕು. ಜಮೀನು ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು
ಸಿಡಿಪಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. 73.40 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಯಾವೆಲ್ಲ ಬದಲಾವಣೆಗಳನ್ನು ತರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಭ್ರಷ್ಟಾಚಾರ ನಿಲ್ಲಬೇಕು. ಇದನ್ನು ನಾವು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಿಸಿದರು. ಬಿಡಿಎನಲ್ಲಿ ದೊಡ್ಡಮಟ್ಟದ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ, ಹೀಗಾಗಿ ಕೆಲಸ ನೀಡುವ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಚರ್ಚೆ ಮಾಡಿದ್ದೇನೆ. ಅವರ ಸಲಹೆಗಳನ್ನು ಸಂಗ್ರಹಿಸಿದ್ದು, ಸಾರ್ವಜನಿಕ ಅಭಿಪ್ರಾಯ ಪಡೆಯುತ್ತೇನೆ. ಇನ್ನು ಗುತ್ತಿಗೆದಾರರ ಸಂಘದ ಜೊತೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಿಗದಿಯಾಗಿದೆ. ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
ಸಭೆಯ ಮೂಲಕ ನಗರದ ಅಭಿವೃದ್ಧಿಯ ಕುರಿತು ಪಾಠ ಕಲಿತಿದ್ದೇನೆ: ಇದಕ್ಕೂ ಮೊದಲು ಬಿಬಿಎಂಪಿ ಅಧಿಕಾರಿಗಳೊಂದಿಗಿನ ಸಭೆಯ ನಂತರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಹಳ ವಿಶ್ವಾಸವಿಟ್ಟು ಜನರು, ಹೈಕಮಾಂಡ್ ಬದಲಾವಣೆ ತರುವ ವಿಶ್ವಾಸದಿಂದ ಬೆಂಗಳೂರು ನಗರಾಭಿವೃದ್ಧಿಯ ಜವಾಬ್ದಾರಿ ನೀಡಿದ್ದಾರೆ. ನಾನು ಗ್ರಾಮೀಣ ಭಾಗದಿಂದ ಬಂದಿದ್ದರೂ ಇಲ್ಲಿನ ಇತಿಹಾಸ, ಅಭಿವೃದ್ಧಿ, ಈ ನಗರದ ಮಹತ್ವ ಅರಿತಿದ್ದೇನೆ ಎಂದು ಹೇಳಿದರು.
ನಗರ ಈ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಜನರು ಶ್ರಮವಹಿಸಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡರು, ನಂತರ ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕ ನಾಯಕರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕಾರ್ಪೊರೇಟರ್ ಗಳು, ಹಲವು ನಾಯಕರು ಸಹ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಒಂದು ಕೋಟಿಗಿಂತ ಹೆಚ್ಚು ಜನರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. 40 ರಿಂದ 50 ಲಕ್ಷ ಜನ ಹೊರಗಿನಿಂದ ಬಂದು ಹೋಗುವುದನ್ನು ಮಾಡುತ್ತಾ ಇದ್ದಾರೆ ಎಂದು ತಿಳಿಸಿದರು.
ವಿಶ್ವದ ಅನೇಕ ನಾಯಕರಿಗೆ, ಉದ್ಯಮಿಗಳಿಗೆ ಬೆಂಗಳೂರಿನ ಮೂಲಕ ಭಾರತವನ್ನು ನೋಡುವಂತಾಗಿದೆ. ಹಾಗಾಗಿ ಇಲ್ಲಿ ಹಚ್ಚಿನ ಸೌಲಭ್ಯವನ್ನ ಒದಗಿಸುವ ಕೆಲಸ ಆಗಬೇಕಿದೆ. ಇವತ್ತು ನಾನು ಈ ಸಭೆಯ ಮೂಲಕ ನಗರದ ಅಭಿವೃದ್ಧಿಯ ಕುರಿತು ಪಾಠ ಕಲಿತಿದ್ದೇನೆ. ಬಿಬಿಎಂಪಿ ಬೆಂಗಳೂರಿನ ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.