ಬೆಂಗಳೂರು: ಐದು ವರ್ಷಗಳ ಕಾಲ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರಿನ ರಾಜ್ಯ ಒಕ್ಕಲಿಗರ ಸಂಘದ ಕೇಂದ್ರ ಕಚೇರಿ ಬಳಿ ಗುರುವಾರ ಮಾತನಾಡಿದ ಅವರು, ಪಕ್ಷ ಹೇಳಿದ್ದನ್ನು ಪಾಲಿಸುವುದಷ್ಟೇ ನಮಗೆ ಗೊತ್ತು ಎಂದು ಸೂಚ್ಯವಾಗಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಕಚ್ಚಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಜಗಳ ಇಲ್ಲ. ಕಿತ್ತಾಟ ಇರೋದು ಬಿಜೆಪಿಯಲ್ಲಿ. ಹೀಗಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿ ಮುಖಂಡರು ತಮ್ಮ ವೈಫಲ್ಯ ಮುಚ್ಚಿಡಲು ಈ ರೀತಿ ಮಾತನಾಡುತ್ತಾರೆ. ನಮ್ಮ ಶಾಸಕರುಗಳಿಗೆ ಚಾಕೊಲೆಟ್ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಾವು ಆಪರೇಶನ್ ಕಮಲ ಮಾಡುತ್ತಿಲ್ಲ. ಬೇಕಾದರೆ ಅವರೇ ತನಿಖೆ ಮಾಡಿಸಲಿ ಎಂಬ ಬಿಎಸ್ವೈ ಹೇಳಿಕೆ ಬಗ್ಗೆ ಕೇಳಿದಾಗ, ಯಡಿಯೂರಪ್ಪ ಅವರ ಸಲಹೆಯನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ ಎಂದರು.
ಹಂಪಿಯಲ್ಲಿ ಗುರುವಾರ 'ಕರ್ನಾಟಕ ಸಂಭ್ರಮ 50'ಕ್ಕೆ ಚಾಲನೆ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ಹೊಸಪೇಟೆಗೆ ಆಗಮಿಸಿದ್ದ ಸಿದ್ದರಾಮಯ್ಯ, ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಮುಂದಿನ 5 ವರ್ಷ ನಾನೇ ಸಿಎಂ ಆಗಿ ಮುಂದುವರೆಯುವೆ. ಡಿಸಿಎಂ ವಿಚಾರವಾಗಿ ತೀರ್ಮಾನ ಮಾಡುವುದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನವಿದ್ದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ ಬಳಿಕವೇ ಆಗಲಿದೆ ಎಂದಿದ್ದರು.
ಮತ್ತೊಂದೆಡೆ ಮೈಸೂರಿನಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. 5 ವರ್ಷ ಅಂಬಾರಿ ಹೊತ್ತ ಆನೆ ತರಹ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಧಿಕಾರ ಹಂಚಿಕೆಯ ಬಗ್ಗೆ ನನ್ನನ್ನು ಕರೆದು ಯಾರೂ ಮಾತನಾಡಿಲ್ಲ ಎಂದರು.
ಇದನ್ನೂ ಓದಿ: ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನನಗೇನೂ ಗೊತ್ತಿಲ್ಲ: ಸಚಿವ ಡಾ ಎಚ್ ಸಿ ಮಹದೇವಪ್ಪ