ಬೆಂಗಳೂರು: ಬೆಂಗಳೂರಿನ ಫುಟ್ಪಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ನ ಆದೇಶವಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರ ರಸ್ತೆ ಸುರಕ್ಷತಾ ಸಮಿತಿ ಹಾಗೂ ಸಂಚಾರಿ ಪೊಲೀಸ್ ಇಲಾಖೆಯು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಡಿಸಿಎಂ ಪಾಲ್ಗೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯನಗರದ ಫುಟ್ಪಾತ್ ಮೇಲಿನ ಅಂಗಡಿಗಳ ತೆರವು ಕಾರ್ಯಾಚರಣೆಯ ವಿಚಾರವಾಗಿ ಪ್ರತಿಕ್ರಿಯಿಸಿದರು.
''ಬೆಂಗಳೂರಿನ ಫುಟ್ಪಾತ್ ಮೇಲಿರುವ ಅಂಗಡಿಗಳನ್ನ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ, ಸಹ ಕೆಲವು ನಿಬಂಧನೆಗಳೊಂದಿಗೆ ಫುಟ್ಪಾತ್ ಮೇಲೆ ಬದಿಯಲ್ಲಿ ತಳ್ಳುವ ಗಾಡಿಗಳಲ್ಲಿ ತಾತ್ಕಾಲಿಕ ವ್ಯಾಪಾರ ಮಾಡುವವರಿಗೆ ಪ್ರೋತ್ಸಾಹ ಹಾಗೂ ಹಣದ ಸಹಾಯ ಸಹ ಮಾಡಲು ನಾವು ಸಿದ್ಧರಿದ್ದೇವೆ. ಆದರೆ, ಶಾಶ್ವತವಾಗಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡಿದರೆ, ಪಾದಚಾರಿಗಳು ಎಲ್ಲಿ ಓಡಾಡಬೇಕು'' ಎಂದು ಡಿಕೆಶಿ ಪ್ರಶ್ನಿಸಿದರು.
ಅಲ್ಲದೇ, ''ಫುಟ್ಪಾತ್ನಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುವುದರಿಂದ ಸಾಕಷ್ಟು ತೊಂದರೆಗಳಾಗುತ್ತಿವೆ ಎಂದು ದೂರುಗಳು ಬಂದಿವೆ. ಇದರ ನಂತರ ಹೈಕೋರ್ಟ್ನಿಂದ ಆದೇಶ ಕೂಡಾ ಬಂದಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ವಿಚಾರವಾಗಿಯೇ ನನ್ನ ಬಳಿ ಕೂಡಾ ಎರಡ್ಮೂರು ಬಾರಿ ದೂರುಗಳು ಬಂದಿದ್ದವು. ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ'' ಎಂದು ಅವರು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಹಿತಿ ಇಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕ ಅಥವಾ ತೆಲಂಗಾಣದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಡಿಸಿಎಂ ಶಿವಕುಮಾರ್, ''ನಿಮಗೆ ಏನಾದರೂ ಮಾಹಿತಿ ಇರಬಹುದು. ಆದರೆ, ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ಸಹ ಅದರ ಕುರಿತು ಚರ್ಚಿಸಿಲ್ಲ'' ಎಂದು ಹೇಳಿದರು.
ಪೊಲೀಸ್ಗಿರಿ ಪ್ರೋತ್ಸಾಹಿಸಲ್ಲ: ರಾಜ್ಯದಲ್ಲಿ ಜನಸಾಮಾನ್ಯರಿಗೆ ಭದ್ರತೆಯಿಲ್ಲ ಎಂಬ ಬಿಜೆಪಿಯ ಆರೋಪದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ''ಬಿಜೆಪಿ ಯಾವಾಗಲೂ ಅವರ ಕಾಲದ್ದನ್ನೇ ರಿಪೀಟ್ ಮಾಡುತ್ತಿದೆ. ನಮ್ಮ ಅವಧಿಯಲ್ಲಿ ನಾವು ಯಾವುದೇ ರೀತಿಯ ನೈತಿಕ ಪೊಲೀಸ್ಗಿರಿಯನ್ನ ಪ್ರೋತ್ಸಾಹಿಸುವುದಿಲ್ಲ'' ಎಂದು ಸ್ಪಷ್ಪಡಿಸಿದರು.
ಇದೇ ವೇಳೆ, ಅನುಭವ ಮಂಟಪಕ್ಕೆ ಅನುದಾನ ವಿಚಾರವಾಗಿ ಬಸವಕಲ್ಯಾಣ ಶಾಸಕರ ಬೇಡಿಕೆಯ ಕುರಿತು ಮಾತನಾಡಿ, ''ಅವರಿನ್ನೂ ಹೊಸದಾಗಿ ಶಾಸಕರಾಗಿದ್ದಾರೆ. ಅನುಭವ ಮಂಟಪ, ಅಲ್ಲಮಪ್ರಭುಗಳ ಹೆಸರನ್ನೇ ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲಿಗೆ ನಮಗೆ ಎಷ್ಟು ಮುತುವರ್ಜಿ ಇದೆ ಎನ್ನುವುದನ್ನ ಗಮನಿಸಿ. ಅವರ ಸರ್ಕಾರದ ಅವಧಿಯಲ್ಲಿ ಯಾಕೆ ಅನುಭವ ಮಂಟಪಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಅನುಭವ ಮಂಟಪ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರ'' ಎಂದರು.
ಇದನ್ನೂ ಓದಿ: ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ: ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ