ಬೆಂಗಳೂರು: 150ನೇ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ಬಿಬಿಂಎಪಿ ಹಾಗೂ ಎನ್ಜಿಒಗಳು ಆಯೋಜಿಸಿದ್ದ ಪ್ಲಾಗ್ ರನ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ರಸ್ತೆ ಬದಿಯ ಕಸ ಸಂಗ್ರಹಿಸುವ ಮೂಲಕ ಆಚರಿಸಿದರು.
ಇಲ್ಲಿನ ಮತ್ತಿಕೆರೆಯ ಜಯರಾಮ್ ಕಾಲೊನಿಯ ಸ್ಲಂ ರಸ್ತೆಯಲ್ಲಿ ಹಾಗೂ ಹೆಚ್ಎಂಟಿ ಮುಖ್ಯರಸ್ತೆಯಲ್ಲಿ ಗೋಣಿಚೀಲ ಹಿಡಿದು ಪ್ಲಾಸ್ಟಿಕ್ ಕಸ ಹೆಕ್ಕಿದರು. ಆದರೆ, ನೂತನ ಮೇಯರ್ ಗೌತಮ್ ಕುಮಾರ್ ಪ್ಲಾಗ್ ರನ್ ಕಾರ್ಯಕ್ರಮಕ್ಕೆ ಗೈರಾಗಿದ್ದು, ಹಲವರ ಕಣ್ಣು ಕೆಂಪಾಗಿಸಿತು.
ಈ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಮೇಯರ್ ಗೌತಮ್, ಅನಾರೋಗ್ಯದ ಕಾರಣದಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೋಗದಂತಾಗಿದೆ. ಇದನ್ನು ಬಿಟ್ಟರೆ ಬೇರೆ ಯಾವ ಅಸಮಾಧಾನ, ಭಿನ್ನಾಭಿಪ್ರಾಯ ಇಲ್ಲ ಎಂದರು.
ನಂತರ ಎಂ.ಜಿ,ರಸ್ತೆಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಎಂ ಭೇಟಿಗೆ ತೆರಳಿದರು.
ಸ್ಲಂ ನಿವಾಸಿಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಡಿಸಿಎಂ ಅಶ್ವತ್ಥ ನಾರಾಯಣ ಮನವಿ ಮಾಡಿದರು. ಸ್ವಚ್ಛತೆ ಎಲ್ಲಾ ದಿನವೂ ನಡೆಯಬೇಕು. ಬೆಂಗಳೂರಿನಲ್ಲಿ ಆರಂಭವಾದ ಪ್ಲಾಗ್ ರನ್ ಈಗ ದೇಶದಾದ್ಯಂತ ನಡೆಯುತ್ತಿರುವುದು ಖುಷಿ ವಿಚಾರ ಎಂದರು.