ಬೆಂಗಳೂರು: 12 ವರ್ಷಗಳ ನಂತರ ತುಂಬಿ ಕೋಡಿ ಹರಿದಿರುವ ಮಲ್ಲೇಶ್ವರಂನ ಸ್ಯಾಂಕಿ ಕೆರೆಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಬಾಗಿನ ಅರ್ಪಿಸಿದರು.
ಬೆಳಗ್ಗೆ 9.30ಕ್ಕೆ ಸರಿಯಾಗಿ ಗಂಗೆಗೆ ಪೂಜೆ ಸಲ್ಲಿಸಿದ ಅವರು, ನಗರದಲ್ಲಿ ಉತ್ತಮ ಮಳೆಯಾಗಿ ಇಡೀ ನಗರ ಹಚ್ಚಹಸಿರಿನಿಂದ ಕಂಗೊಳಿಸಲಿ. ಇಡೀ ರಾಜ್ಯ ಸಮೃದ್ಧಿಯಿಂದ ತುಂಬಿರಲಿ. ಇಡೀ ಮಲ್ಲೇಶ್ವರಂನ ಜನರ ಉಸಿರಾಗಿರುವ ಈ ಕೆರೆ ಸದಾ ಹಸಿರಾಗಿರಲಿ ಎಂದು ಪ್ರಾರ್ಥಿಸಿದರು. ಅಲ್ಲದೆ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಂತೆ, ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಂತೆ ಹಾಗೂ ದಕ್ಷಿಣ ಭಾರತದ ಹೆಸರಾಂತ ಪ್ರವಾಸಿ ತಾಣ ಊಟಿಯಂತೆ ದಟ್ಟವಾದ ಮಂಜಿನಿಂದ ಕಂಗೊಳಿಸುತ್ತಿದ್ದ ಸ್ಯಾಂಕಿ ಕೆರೆಯನ್ನು ಕಂಡು ಉಪ ಮುಖ್ಯಮಂತ್ರಿಗಳು ಮೂಕವಿಸ್ಮಿತರಾದರು.
ಪೂಜೆ ಸಲ್ಲಿಕೆ ನಂತರ ಮಾತನಾಡಿದ ಡಿಸಿಎಂ, ನಗರದಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಕಿ ಕೆರೆ ತುಂಬಿದೆ. ಇದರಿಂದ ಈ ಭಾಗದ ಜನರಿಗೆ ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ತಾಯಿ ಗಂಗೆಗೆ ಪೂಜೆ ಸಲ್ಲಿಸಿದ್ದು ಸಂತಸ ಉಂಟು ಮಾಡಿದೆ. ಭವಿಷ್ಯದಲ್ಲಿ ನಗರದಲ್ಲಿ ಸುರಿಯುವ ನೀರು ವ್ಯರ್ಥವಾಗದಂತೆ ಸಂಗ್ರಹ ಮಾಡಲು ಎಲ್ಲೆಡೆ ಇಂಗು ಗುಂಡಿಗಳನ್ನು ಮಾಡಲಾಗುವುದು. ಕೆರೆಗಳಲ್ಲಿ ನೀರು ಸಂಗ್ರಹಣ ಸಾಮರ್ಥ್ಯ ಹೆಚ್ಚಿಸಲಾಗುವುದು. ಪ್ರತೀ ವರ್ಷ ಈ ಕೆರೆಯೂ ಸೇರಿ ಎಲ್ಲಾ ಕೆರೆಗಳು ಕೋಡಿ ಹರಿಯಲಿ ಎಂದು ಆಶಿಸಿದರು.
ಕೆರೆ ತುಂಬಿದ್ದು ಹೇಗೆ?: ಕೆರೆಯ ಜಲಾನಯನ ಪ್ರದೇಶವಾದ ಸದಾಶಿವನಗರ, ಅರಣ್ಯ ಭವನ ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಆ ಭಾಗಗಳಿಂದ ನೀರು ಹರಿದು ಬರಲು ಇದ್ದ ಕಾಲುವೆಗಳು ಹೂಳು, ಕಸದಿಂದ ಮುಚ್ಚಿ ಹೋಗಿದ್ದವು. ಡಿಸಿಎಂ ಪ್ರಯತ್ನದಿಂದಾಗಿ ಅವುಗಳನ್ನು ಸರಿ ಮಾಡಿ ಕೆರೆ ಕಡೆಗೆ ನೀರು ಹರಿಸುವ ಹಾಗೆ ಮಾಡಿದ್ದರಿಂದ ಕೆರೆ ತುಂಬಿದೆ.
ರಾಜ್ಯದಲ್ಲಿ ಸ್ಥಿರ ಸರ್ಕಾರವಿದ್ದು, ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದೆ. ನಗರದಲ್ಲಿ ಮಳೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲಾಗುವುದು. ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದರು. ಬಾಗಿನ ಅರ್ಪಿಸಿದ ನಂತರ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸ್ಯಾಂಕಿ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ರಂಗನಾಥ, ಪಾಲಿಕೆ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಚಿದಾನಂದ, ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಸೇರಿದಂತೆ ಮತ್ತಿತರರು ಪೂಜೆಯಲ್ಲಿ ಭಾಗಿಯಾಗಿದ್ದರು.