ಬೆಂಗಳೂರು: ನಾಳೆ ಮತ್ತು ನಾಡಿದ್ದು ನಡೆಯಲಿರುವ ಸಿಇಟಿ ಪರೀಕ್ಷೆಯ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಲ್ಲೇಶ್ವರದ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಪರೀಕ್ಷಾ ಕೇಂದ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಗಮನಿಸಿದರು. ವಿದ್ಯಾರ್ಥಿಗಳು ಕೂರುವ ಅಂತರ, ಕೊಠಡಿಗಳ ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್, ಭದ್ರತೆ, ಸಾರಿಗೆ, ಮೂಲಸೌಕರ್ಯ ಮತ್ತಿತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಡಿಸಿಎಂ, ಸಿಇಟಿ ಪರೀಕ್ಷೆ ಬಗ್ಗೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿಯೂ ನಿರಾತಂಕವಾಗಿ ಪರೀಕ್ಷೆ ನಡೆಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸವಾಲಿನ ನಡುವೆಯೂ ನಾವು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ರೀತಿ ದ್ವಿತೀಯ ಪಿಯುಸಿಯ ಒಂದು ವಿಷಯದ ಪರೀಕ್ಷೆಯನ್ನು ಕೂಡ ನಿರಾತಂಕವಾಗಿ ನಡೆಸಿದ್ದೇವೆ. ಈ ಪರೀಕ್ಷೆಯನ್ನು ಕೂಡ ಯಾವುದೇ ತೊಂದರೆ ಇಲ್ಲದೆ ನಡೆಸಲು ಸರ್ಕಾರಕ್ಕೆ ಸಾಧ್ಯವಿದೆ ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 23-24ಕ್ಕೆ ಸಿಇಟಿ ಪರೀಕ್ಷೆ ನಿಗದಿಯಾಗಿತ್ತು. ಆದ್ರೆ ಕೋವಿಡ್ ಲಾಕ್’ಡೌನ್ ಇದ್ದ ಕಾರಣಕ್ಕೆ ಮುಂದೂಡಲಾಯಿತು. ಮೇ 12ರಂದು ಜುಲೈ 30-31ರಂದು ಪರೀಕ್ಷೆ ನಡೆಸುವುದು ಎಂದು ನಿರ್ಧರಿಸಲಾಯಿತು. ಆ ಕ್ಷಣದಿಂದಲೇ ಸರ್ಕಾರ ಕೋವಿಡ್ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಸಾರಿಗೆ, ವೈದ್ಯಕೀಯ, ರಕ್ಷಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಯಿತು.
ಕೋವಿಡ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಕಂಟೈನ್ಮೆಂಟ್ ಝೋನ್ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಬ್ಬರ ಜೊತೆ ಬಂದು ಪರೀಕ್ಷೆ ಬರೆಯ ಬಹುದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್, ದೈಹಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದರು.
ಕಂಟೈನ್ಮೆಂಟ್ ಝೋನ್ನಿಂದ ಬರುವ ವಿದ್ಯಾರ್ಥಿಗಳು ಹಾಗೂ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುತ್ತೇವೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಸಿದ್ಧತೆ ಬಗ್ಗೆ ಹೈಕೋರ್ಟ್ ಗಮನಕ್ಕೆ ತರುತ್ತೇವೆ. ಕೋರ್ಟ್ ಆದೇಶದಂತೆ ನಡೆದು ಕೊಳ್ತೀವಿ. 30-40 ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದಾರೆ. ಜ್ಞಾನಭಾರತಿ, ಜಿಕೆವಿಕೆಯಲ್ಲಿ ಅವರಿಗೆ ಪರೀಕ್ಷೆ ಬರೆಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ತಿಳಿಸಿದರು.