ಬೆಂಗಳೂರು: ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ನಾಯಕನಾಗಿ ಸ್ಪಷ್ಟವಾಗಿ ತಿಳಿಸುವಂತಹದ್ದು ಇತ್ತು, ಅದನ್ನು ತಿಳಿಸಿದ್ದಾರೆ. ಅದರಲ್ಲಿ ಯಾವುದೇ ಗೊಂದಲ ಇಲ್ಲ. ಸಮಾಜ ಬಯಸುತ್ತಿರುವ ಸ್ಪಷ್ಟತೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಹೇಳಿದರು.
ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷ ನಾನೇ ಸಿಎಂ ಎಂದು ಹಾಸನದಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂಬುದನ್ನು ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಹೇಳಿ ಸಿಎಂ ಮಾದರಿಯಾಗಿದ್ದಾರೆ. ಯಾರೂ ನಾವು ಪಕ್ಷಕ್ಕೆ ಹೊರತಾದವರಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ನಡೆಯನ್ನು ಸಮರ್ಥಿಸಿಕೊಂಡರು.
ಅರುಣ್ ಸಿಂಗ್ ಭೇಟಿಗೆ ಮಹತ್ವ ಕೊಡಬೇಕಿಲ್ಲ:
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಅರುಣ್ ಸಿಂಗ್ ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳು. ಪಕ್ಷದ ಪ್ರಭಾರಿಯಾಗಿ ಆಗಾಗ ರಾಜ್ಯಕ್ಕೆ ಬರುತ್ತಲೇ ಇರಬೇಕು. ಪಕ್ಷದಲ್ಲಿ, ಸರ್ಕಾರದಲ್ಲಿ ಸಮಾಲೋಚನೆ, ಮೇಲ್ವಿಚಾರಣೆ ಮಾಡುವಂತಹದ್ದು ಆಗಬೇಕು. ಇದೆಲ್ಲ ಆಗಾಗ ಆಗಬೇಕಾಗಿರುವುದೇ ಆಗಿದೆ. ಹಾಗಾಗಿ ಅರುಣ್ ಸಿಂಗ್ ಭೇಟಿ ವಿಷಯಕ್ಕೆ ಮಹತ್ವ ಕೊಡುವಂತಹದ್ದು ಏನೂ ಇಲ್ಲ ಎಂದರು.
ಹಂತ ಹಂತವಾಗಿ ಅನ್ಲಾಕ್:
ಪರಿಸ್ಥಿತಿ ನಿಯಂತ್ರಣ ನೋಡಿಕೊಂಡು ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತದೆ. ಯಾವ ರೀತಿ ಸಮಸ್ಯೆ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ನೋಡುತ್ತೇವೆ. ಇಷ್ಟು ದಿನ ಸೋಂಕು ಇಳಿಮುಖವಾಗಿತ್ತು. ಈಗ ಅನ್ಲಾಕ್ ಆದ ಮೇಲೆ ಸಹಜವಾಗಿ ಜನರ ಓಡಾಟದಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎಲ್ಲಿಯವರೆಗೂ ನಮಗೆ ಪರಿಸ್ಥಿತಿ ಸುಧಾರಿಸಲು, ತಡೆದುಕೊಳ್ಳಲು ಸಾಧ್ಯವಿದೆಯೋ ಅಲ್ಲಿಯವರೆಗೂ ಸಮಸ್ಯೆ ಆಗಲ್ಲ. ಆದರೆ ಜನರ ಸಹಕಾರ ಅತಿ ಮುಖ್ಯ ಎಂದರು.