ಬೆಂಗಳೂರು : ಸರ್ಕಾರ ನೆರೆ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರು, ಪ್ರಕೃತಿ ವಿಕೋಪ ಹೇಳಿ ಕೇಳಿ ಬರಲ್ಲ. ಈಗಾಗಲೇ ಕೆಲವು ಕಡೆ ಪ್ರವಾಹ ಬರುತ್ತಿದೆ. ಜನರ ಕಷ್ಟದ ಬಗ್ಗೆ ಕಾಂಗ್ರೆಸ್ ನಾಯಕರು ಸಲಹೆ ಕೊಡಬೇಕು ಎಂದು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಹಿಂದೆ ಕೂಡ ನೆರೆ ಬಂದಿತ್ತು. ಆಗಲು ನಮ್ಮ ಸರ್ಕಾರ ಎಲ್ಲ ಪರಿಹಾರ ಕ್ರಮ ಕೈಗೊಂಡಿತ್ತು. ಕಾಂಗ್ರೆಸ್ನವರು ಆರೋಪಗಳನ್ನು ಮಾಡುತ್ತಿದ್ದಾರೆ. ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ ಎಂಬುದು ಸರಿಯಲ್ಲ. ಜನರ ಮಧ್ಯೆ ಇದ್ದು ನಮ್ಮ ಸಚಿವರು ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈಗ ಮಳೆ ಆರಂಭವಾಗಿದೆ. ಸರ್ಕಾರ ನೆರೆ ಸ್ಥಿತಿ ಎದುರಿಸಲು ಸಜ್ಜಾಗಿದೆ. ಈ ಹಂತದಲ್ಲಿ ಸರ್ಕಾರ ವಿಫಲವಾಗಿದೆ ಅಂದರೆ ಕಾಂಗ್ರೆಸ್ ಮನಸ್ಥಿತಿ ಎಂತಹದ್ದು ಎಂದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸಿ ಸರ್ಕಾರಕ್ಕೆ ಸಲಹೆ-ಸೂಚನೆ ಕೊಡಬೇಕು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಚರ್ಚೆ ಮಾಡಬೇಕೆಂದ್ರೆ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ಅವರು ಗುಡುಗಿದರು.