ಬೆಂಗಳೂರು: ಚುನಾವಣೆ ಕುರಿತು ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದೇ ಕಕ್ಕಾಬಿಕ್ಕಿಯಾದ ಚುನಾವಣಾ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರಿಗೌಡರು ಬಿಸಿ ಮುಟ್ಟಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗಲಿಲ್ಲ. ನಿಮಗೆ ಏನೂ ಗೊತ್ತಿಲ್ಲ ಇನ್ನು ಜನರಿಗೆ ಏನೂ ಹೇಳುತ್ತಿರಾ.? ದೊಡ್ಡ ಹುದ್ದೆಯಲ್ಲಿ ಇದ್ದರೂ ಸಣ್ಣ ವಿಚಾರ ಗೊತ್ತಿಲ್ವ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗದುಕೊಂಡರು.
ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಚುನಾವಣಾ ಕೆಲಸವನ್ನು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು. ಮಾದರಿ ನೀತಿ ಸಂಹಿತೆಯು ಮಾರ್ಚ್ 10 ರಿಂದ ಜಾರಿಯಾಗಿದ್ದು, ಚುನಾವಣಾ ಆಯೋಗದ ಸಲಹೆ ಹಾಗೂ ಸೂಚನೆಗಳನ್ನು ಅಧಿಕಾರಿಗಳು ಪಾಲಿಸಬೇಕು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕು. ಉಲ್ಲಂಘನೆಯಾದರೆ ಆ ವ್ಯಕ್ತಿಯ ಮೇಲೆ ಮೊಕದ್ದಮೆ ದಾಖಲಿಸಿ ತಕ್ಷಣವೇ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸುವುದು ನಮ್ಮ ಗುರಿ. ಪ್ಲೈಯಿಂಗ್ ಸ್ಕ್ವಾಡ್, ಅಂಕಿ ಅಂಶಗಳ ಕಣ್ಗಾವಲು ತಂಡ, ವಿಡಿಯೋ ಸರ್ವಲೇನ್ಸ್ ತಂಡಗಳ ಕಾರ್ಯವೈಖರಿ ಚುನಾವಣೆಯಲ್ಲಿ ಮುಖ್ಯವಾಗಿದ್ದು ಇದನ್ನು ನಿಭಾಯಿಸುವ ಅಧಿಕಾರಿಗಳು ಯಾವುದೇ ತಪ್ಪು ಮಾಡದೇ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ರು.
ಇವಿಎಂ, ವಿವಿ ಪ್ಯಾಡ್ ಕುರಿತು ಪಾಠ ಇದೇ ವೇಳೆ ಅಧಿಕಾರಿಗಳಿಗೆ ಇವಿಎಂ ಮತ್ತು ವಿವಿ ಪ್ಯಾಡ್ ಕುರಿತು ತಿಳಿಸಲಾಯಿತು. ಪ್ರತಿಯೊಬ್ಬ ಸೆಕ್ಟರ್ ಅಧಿಕಾರಿಗಳು ಇವಿಎಂ ಹಾಗೂ ವಿವಿ ಪ್ಯಾಟ್ ಮತಯಂತಗಳ ಬಳಕೆ ಕುರಿತು ಸಂಪೂರ್ಣ ಜ್ಞಾನ ಹೊಂದಿರಬೇಕು. ಮತದಾರರಿಗೆ ಇವಿಎಂ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಇವಿಎಂ ಕುರಿತ ಸುರಕ್ಷತಾ ಮಾನದಂಡಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಲೋಪಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.