ಬೆಂಗಳೂರು: ಸಾಲದ ವಿಚಾರವಾಗಿ ತಾಯಿಯನ್ನೇ ಮಗಳು ಕೊಲೆ ಮಾಡಿರುವ ಘಟನೆ, ಕೆ.ಆರ್.ಪುರಂನ ಅಕ್ಷಯ್ ನಗರದಲ್ಲಿ ನಡೆದಿದೆ. ಫೆಬ್ರವರಿ 01 ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಲಗಿದ್ದ ತಾಯಿಗೆ ಚಾಕು ಇರಿದು ಅಮೃತಾ(33) ಎಂಬುವ ಟೆಕ್ಕಿ ಕೊಲೆ ಮಾಡಿದ್ದಾರೆ. ಸಿಂಪೋನಿ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಅಮೃತಾ, ಮುಂಜಾನೆ ತಾಯಿ ನಿರ್ಮಾಲಾ ಅವರನ್ನು ಕೊಲೆ ಮಾಡಿ, ತಮ್ಮ ಹರೀಶ್ ಅವರನ್ನು ಸಹ ಕೊಲ್ಲಲು ಯತ್ನಿಸಿದ್ದಾರೆ.
ತಾಯಿಯನ್ನು ಕೊಲೆ ಮಾಡಿ ಬಳಿಕ ತಮ್ಮ ಹರೀಶ್ಗೆ ಚಾಕು ಇರಿಯಲು ಹೋಗಿದ್ದಾರೆ. ಈ ವೇಳೆ, ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಹರೀಶ್ ಪ್ರಶ್ನೆ ಕೇಳಿದ್ದು, ನಾನು ₹15 ಲಕ್ಷ ಸಾಲ ಮಾಡಿದ್ದೀನಿ ಅದನ್ನು ನಾನು ಹೈದರಾಬಾದ್ಗೆ ಹೋದಾಗ, ಸಾಲಗಾರರು ನಿಮ್ಮ ಬಳಿ ಬರ್ತಾರೆ. ಅದಕ್ಕೆ ಅಮ್ಮನನ್ನು ಕೊಲೆ ಮಾಡಿದ್ದೀನಿ ಹಾಗೂ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದರಂತೆ.
ಆದರೆ, ಅಮೃತಾಳ ಪ್ರೀತಿಗೆ ಮನೆಯವರ ವಿರೋಧ ಇದ್ದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ತಾಯಿ ಹಾಗೂ ತಮ್ಮ ಅಮೃತಾಳ ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ತಾಯಿಯನ್ನು ಕೊಂದು ಅಮೃತಾ ಪರಾರಿಯಾಗಿದ್ದು, ಈ ಕುರಿತಾಗಿ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿ ಅಮೃತಾಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.