ಬೆಂಗಳೂರು: ಕೋವಿಡ್ ತೀವ್ರವಾಗಿರುವ ಹಿನ್ನೆಲೆಯಲ್ಲಿ ಶಾಲೆಗಳ ಪುನಾರಂಭಕ್ಕೆ ದಿನಾಂಕ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವಂತೆ ನಿರ್ದೇಶನ ಕೋರಿ ಎಂ ರಾಧಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಶಾಲೆಗಳನ್ನು ಪುನಾರಂಭಿಸಲು ಸರ್ಕಾರ ತಾತ್ಕಾಲಿಕ ದಿನಾಂಕವನ್ನು ನಿಗದಿ ಮಾಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಈ ವಿಚಾರದಲ್ಲಿ ಸರ್ಕಾರಕ್ಕೆ ನಿರ್ದೇಶಸಲು ಬರುವುದಿಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಇದೇ ವೇಳೆ, ಸಾಂಕ್ರಾಮಿಕ ರೋಗವಿರಲಿ, ಇಲ್ಲದಿರಲಿ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು ಎಂದು ಅಭಿಪ್ರಾಯಪಟ್ಟ ಪೀಠ, ಸರ್ಕಾರ ಶಾಲಾ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ತರಗತಿಗಳನ್ನು ನಡೆಸಲು ಸೂಕ್ತ ಯೋಜನೆ ರೂಪಿಸಬೇಕು. ಆನ್ಲೈನ್ ಅಥವಾ ಆಫ್ ಲೈನ್ನಲ್ಲಿ ಶಿಕ್ಷಣ ನೀಡುವ ಸಂಬಂಧ ನೀಲನಕ್ಷೆ ಸಿದ್ದಪಡಿಸಬೇಕು. ಶಾಲೆಗಳನ್ನು ತೆರೆಯುವ ಕುರಿತು ತಜ್ಞರೊಂದಿಗೆ ಸಮಾಲೋಚಿಸಬೇಕು. ಮುಖ್ಯವಾಗಿ ಮಕ್ಕಳ ಕಲಿಕೆಗೆ ಅಗತ್ಯವಿರುವ ಪುಸ್ತಕ, ನೋಟ್ ಬುಕ್ ಹಾಗೂ ಇತರೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು. ಈ ಕುರಿತ ವರದಿಯನ್ನು ಜೂನ್ 8ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಇದನ್ನು ಓದಿ: ಬಿಬಿಎಂಪಿ ಆಸ್ತಿ ತೆರಿಗೆ ರಿಯಾಯಿತಿ ವ್ಯಾಪ್ತಿ ಮತ್ತೆ ಮುಂದುವರಿಕೆ