ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಡಿಸೆಂಬರ್ ಮೊದಲ ವಾರ ಕಾಂಗ್ರೆಸ್ನಿಂದ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಹಲವು ಭಾಗಗಳಿಗೆ ಅನುಕೂಲ ಕಲ್ಪಿಸುವ ಯೋಜನೆ ಪರವಾಗಿ ನಾವು ದನಿ ಎತ್ತಬೇಕಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಸೇರಿ ಡಿಸೆಂಬರ್ ಮೊದಲ ವಾರದಲ್ಲಿ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಇಂದಿನ ಸಭೆಯಲ್ಲಿ ಬೆಳಗಿನಿಂದ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು, ಮುಂಚೂಣಿ ಘಟಕದ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಪ್ರಮುಖ ನಾಯಕರ ಜೊತೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದೇವೆ. ಪಕ್ಷ ಸಂಘಟನೆ ಮಾಡಬೇಕೆಂಬುದು ಚರ್ಚೆಯಾಗಿತ್ತು. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಕಾರ್ಯಕಾರಿ ಸಮಿತಿ ಹನ್ನೆರಡು ವರ್ಷಗಳ ಬಳಿಕ ಚುನಾವಣೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಹೊಸದಾಗಿ ಸದಸ್ಯತ್ವ ನೋಂದಣಿಯನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆಸಲು ಅವಕಾಶ ನೀಡಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ನಾಯಕರು ಸೇರಿ ಬೆಂಗಳೂರು ನಗರದಲ್ಲಿ ಅಕ್ಟೋಬರ್ 14ರಂದು ನೂತನ ಸದಸ್ಯತ್ವ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಪಕ್ಷದ ಸದಸ್ಯರಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವವರು ಕೂಡ ಈಗ ಹೊಸದಾಗಿ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಹೊಸದಾಗಿ ಸದಸ್ಯತ್ವ ಪಡೆಯುವವರು 5 ರೂ. ಪಾವತಿಸಬೇಕು. ಸಕ್ರಿಯ ಕಾರ್ಯಕರ್ತರಾಗಲು ಬಯಸುವವರು ನೂರು ರೂಪಾಯಿ ಪಾವತಿಸಬೇಕು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನೀಡಿರುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾರಂಭ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಾರ್ಯಕ್ರಮ ಚಾಲನೆ ಪಡೆದ ಬಳಿಕ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ, ರಾಜ್ಯಮಟ್ಟದ ಪ್ರತಿಯೊಬ್ಬ ನಾಯಕರನ್ನು ಆಹ್ವಾನಿಸಿ ಸದಸ್ಯತ್ವ ನೋಂದಣಿ ಅಭಿಯಾನ ಮುಂದುವರಿಸುತ್ತೇವೆ. ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಮಾಜಿ ಸಂಸದರು ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದೇವೆ. 75 ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಮೂಲಕ, ಅತ್ಯಂತ ಯಶಸ್ವಿಯಾಗಿ ಇನ್ನಷ್ಟು ಯುವ ಸಮುದಾಯವನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಸಂಕಲ್ಪದೊಂದಿಗೆ ಅಭಿಯಾನ ಆರಂಭಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ