ಬೆಂಗಳೂರು: ನನ್ನ ಹೋರಾಟ ಸಿದ್ದರಾಮಯ್ಯ - ದಿನೇಶ್ ಗುಂಡೂರಾವ್ ವಿರುದ್ಧ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಡಿ.ಕೆ.ಶಿವಕುಮಾರ್ ಯಾರು ಅಂತ ಗೊತ್ತಿದೆ. ಅಧಿಕಾರ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಲಾಬಿ ಮಾಡಿ ಅಧಿಕಾರ ಪಡೆಯುವ ಅವಶ್ಯಕತೆ ನನಗೆ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನೇಕೆ ಸಿದ್ದರಾಮಯ್ಯ ವಿರುದ್ಧ ಮಾತನಾಡ್ಲಿ. ನನಗೆ ಯಾವುದೇ ಆತುರ ಇಲ್ಲ. ನಾನು ಗಾಂಧಿ ಕುಟುಂಬಕ್ಕೆ ನಿಷ್ಠಾನಾಗಿದ್ದೇನೆ. ಅಧಿಕಾರ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಡಿಕೆಶಿ ಗೊತ್ತು. ನಾನು ಲಾಬಿ ಮಾಡಿ ಅಧಿಕಾರ ಪಡೆಯುವ ಅವಶ್ಯಕತೆ ಇಲ್ಲ ಎಂದರು.
ನಾನು ಯಾವ ನಾಯಕರ ಕೆಳಗೆ ಕೆಲಸ ಮಾಡಿದ್ದೀನೋ ಅವರಿಗೆ ನಿಷ್ಠಾವಂತನಾಗಿದ್ದೇನೆ. ನಾನು ಬಂಗಾರಪ್ಪ, ಎಸ್.ಎಂ.ಕೃಷ್ಣ , ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಕೆಳಗೆ ಕೆಲಸ ಮಾಡಿದ್ದೇನೆ. ಅವರಿಗೆ ನಿಷ್ಠಾವಂತನಾಗಿದ್ದೇನೆ. ನಾನು ಯಾಕೆ ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿ ವಿರುದ್ಧ ಮಾತನಾಡಲಿ. ನನಗೇನ್ ತಲೆ ಕೆಟ್ಟಿದ್ಯಾ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಪ್ರಚಾರದಿಂದ ಪಡೆಯಲು ಸಾಧ್ಯವಿಲ್ಲ ಎಂದಿದ್ದ ದಿನೇಶ್ ಗುಂಡೂರಾವ್ಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್, ಯಾರ್ಯಾರೋ ಕೊಡುವ ಹೇಳಿಕೆಗಳಿಗೆ ನಾನೇಕೆ ಮಾತನಾಡಲಿ. ಕೊಡುವ ಸಮಯದಲ್ಲೇ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಸಾಕಷ್ಟು ಸಮಯದಲ್ಲಿ ಅಧಿಕಾರ ತಪ್ಪಿದೆ. ನನ್ನ ಹಣೆಬರಹ ಚೆನ್ನಾಗಿದ್ರೆ ಅಧಿಕಾರ ಸಿಗುತ್ತೆ. ಹಣೆಬರಹ ಚೆನ್ನಾಗಿಲ್ಲಾಂದ್ರೆ ಯಾವ್ ಅಧಿಕಾರ ಸಿಗಲ್ಲ. ಲಕ್ಷ್ಮಣ ಸವದಿ ಸೋತಿದ್ದರೂ ಮಂತ್ರಿಯಾಗಿ, ಡಿಸಿಎಂ ಆಗಿಲ್ವಾ ಎಂದರು.
ಅನರ್ಹ ಶಾಸಕರಿಗೆ ಟಾಂಗ್ ಕೊಟ್ಟ ಡಿಕೆಶಿ, ಮುಂಬೈ ಬ್ಲೂ ಬಾಯ್ಸ್ ಬಗ್ಗೆ ನನಗೆ ಕನಿಕರ ಇದೆ. ಅವರು ಯಾವಾಗ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಕಾಯುತ್ತಿದ್ದೀನಿ. ಒಂದು ಕಾಲ ಇತ್ತು, ನಾವು ಮಾಡಿದ ಒಳ್ಳೆಯ ಕಾರ್ಯಗಳು, ಕೆಟ್ಟ ಕಾರ್ಯಗಳ ಫಲವನ್ನು ನಮ್ಮ ಮಕ್ಕಳು, ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದ್ರೆ ಈಗ ನಾವು ಮಾಡಿದ್ದು ನಾವೇ ಅನುಭಸಿಬೇಕು. ಈಗ ಕಾಲ ಎಲ್ಲವೂ ಬದಲಾಗಿದೆ. ಅವರಿಗಾಗಿ ಮಂತ್ರಿ ಸ್ಥಾನವನ್ನ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಅವರೆಲ್ಲ ಮಂತ್ರಿಯಾಗಲಿ ಎಂದು ಹೇಳಿದರು.