ಬೆಂಗಳೂರು : ಕಾಂಗ್ರೆಸ್ ಸಂಪರ್ಕದಲ್ಲಿರುವ ಬಿಜೆಪಿ ನಾಯಕರ ಮಾಹಿತಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಲ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಡಿ. ಕೆ ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಬಗೆಗಿನ ಪ್ರಶ್ನೆಗೆ ಬೆಂಗಳೂರಿನಲ್ಲಿ ಉತ್ತರಿಸಿದ ಅವರು, ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂದರು.
ವಿಧಾನ ಪರಿಷತ್ ಹಾಗೂ ಶಾಸಕರ ವಿಚಾರ ಚರ್ಚೆ ಮಾಡಲು ಆಗುವುದಿಲ್ಲ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಜತೆ ಯಾರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸಚಿವರುಗಳನ್ನೇ ಕೇಳಿ ಎಂದು ತಿಳಿಸಿದರು.
ಈ ಪ್ರಶ್ನೆಯನ್ನು ನನ್ನ ಬಳಿ ಕೇಳುವ ಬದಲು ಅವರನ್ನೇ ಕೇಳಿ. ನನ್ನ ಬಳಿ ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಿಟ್ಟು ಕೊಡಲಿ?. ಇದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ. ಇದು ರಾಜಕಾರಣದ ಒಂದು ಭಾಗ.
ಪ್ರತಿಯೊಬ್ಬ ನಾಯಕರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಜನ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವ ರೀತಿ ಸಂದೇಶ ನೀಡುತ್ತಾರೆ ಎಂಬುದರ ಮೇಲೆ ಅವರು ತೀರ್ಮಾನ ಮಾಡುತ್ತಾರೆ ಎಂದರು.
ಮೇಕೆದಾಟು ಯೋಜನೆ ಜಾರಿ ಮಾಡಿದರೆ ಭವ್ಯ ಸ್ವಾಗತ : ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಚಿವ ಸೋಮಣ್ಣ ಅವರ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿದಾಗ, ಅವರನ್ನು ನಾನು ಅಭಿನಂದಿಸುತ್ತೇನೆ. ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಹೇಗಿದ್ದರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಜತೆಗೆ ಬಿಜೆಪಿಯ 25 ಸಂಸದರಿದ್ದಾರೆ.
ಒಂದೇ ದಿನದಲ್ಲಿ ಅನುಮತಿ ಪಡೆಯುವ ಸಾಮರ್ಥ್ಯವಿರುವ ಬಲಿಷ್ಠ ಸರ್ಕಾರವಿದೆ. ಅವರು ಈ ಕೆಲಸ ಮಾಡಲಿ. ನಾವು ಹೃತ್ಪೂರ್ವಕವಾಗಿ ಅವರನ್ನು ಅಭಿನಂದಿಸುತ್ತೇವೆ. ಯೋಜನೆಯ ಗುದ್ದಲಿ ಪೂಜೆಗೆ ನಾವು ಕೂಡ ಹೋಗುತ್ತೇವೆ. ಆ ಕಾರ್ಯಕ್ರಮಕ್ಕೆ ಸೋಮಣ್ಣ ಅವರನ್ನು ನಾನೇ ಭವ್ಯವಾಗಿ ಸ್ವಾಗತ ಮಾಡುತ್ತೇನೆ ಎಂದರು.
ಸಿಎಂ ಪೂರ್ಣವಧಿ ಬಗ್ಗೆ ನಮ್ಮದೇನೂ ತಕರಾರಿಲ್ಲ : ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಸಂಭ್ರಮಾಚರಣೆ ಮಾಡುವುದಾದರೆ ಮಾಡಿಕೊಳ್ಳಲಿ. ಮೊದಲು ಮೇಕೆದಾಟು ಯೋಜನೆ ಜಾರಿಗೊಳಿಸಲಿ. ಅವರು 2023ರ ಮೇ 15ರವರೆಗೂ ಅಧಿಕಾರದಲ್ಲಿರಲಿ. ಪೂರ್ಣವಧಿವರೆಗೂ ಸಿಎಂ ಆಗಿರಲಿ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ನಾವು ಬಿಜೆಪಿ ನಾಯಕರಂತೆ ಮಾತನಾಡುವುದಿಲ್ಲ. ನಾಯಕತ್ವ ಬದಲಾವಣೆಗೆ ಅವರ ಪಕ್ಷದವರು ಪ್ರಯತ್ನಿಸುತ್ತಿರಬಹುದು. ಆದರೆ, ಸರ್ಕಾರ ಅಲುಗಾಡಿಸಲು ನಾವು ಪ್ರಯತ್ನಿಸುತ್ತಿಲ್ಲ. ಅದರ ಅಗತ್ಯವೂ ನಮಗಿಲ್ಲ’ ಎಂದರು.
ಅವೈಜ್ಞಾನಿಕ ನಡೆ ಯಾರದ್ದು? : ಕಾಂಗ್ರೆಸ್ನಿಂದ ಕೊರೊನಾ ನಿಯಮಗಳ ಉಲ್ಲಂಘನೆ ಆಗಿದೆ ಎಂಬ ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋವಿಡ್ ಸಮಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಸದಂತೆ ನಿರ್ಬಂಧ ಹೇರಿದ್ದರೂ ಈಜಾಡಿದ್ದವರು ಯಾರು?. ಎಲ್ಲ ಅಪಾರ್ಟ್ಮೆಂಟ್ಗಳಿಗೆ ನಿರ್ಬಂಧ ಹಾಕಿ ನಮ್ಮ ಮನೆಯಲ್ಲಿ ನಾವು ಮಕ್ಕಳ ಜತೆ ಈಜಾಡಬಹುದಾ? ಎಂದು ಪ್ರಶ್ನಿಸಿದರು.
ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು, ಅಕ್ಕಪಕ್ಕದಲ್ಲಿ ಕೂತು ಸಿನಿಮಾ ನೋಡಬಹುದು. ಆದರೆ, ಚಿತ್ರಮಂದಿರದಲ್ಲಿ ಒಂದು ಕುರ್ಚಿ ಬಿಟ್ಟು ಮತ್ತೊಂದು ಕುರ್ಚಿಯಲ್ಲಿ ಕೂರಬೇಕಂತೆ?. ವಿಮಾನ, ಮೆಟ್ರೋ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೂತು ಸಂಚಾರ ಮಾಡಬಹುದು.
ಆದರೆ, ಹೋಟೆಲ್ನಲ್ಲಿ ಮಾತ್ರ 50-50 ಅಂತರ ಕಾಯ್ದುಕೊಳ್ಳಬೇಕಂತೆ. ಇದು ಬ್ರಹ್ಮವಿದ್ಯೆನಾ?. ಇದು ವೈಜ್ಞಾನಿಕ ನಿರ್ಧಾರವೇ?. ಈ ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ನಡೆಯುತ್ತದೆ. ಆದರೆ, ಪ್ರಜ್ಞಾವಂತರು ಇರಬೇಕು. ನೈಟ್ ಕರ್ಫ್ಯೂನಿಂದ ಆಗುವ ಅನುಕೂಲವೇನು?. ಹಗಲು ವೇಳೆ ಜತೆಯಲ್ಲಿ ಓಡಾಡಬಹುದಂತೆ. ರಾತ್ರಿ 9 ಗಂಟೆ ಮೇಲೆ ಜನ ಓಡಾಡುವಂತಿಲ್ಲ. ಕೆಲವರಿಗೆ ರಾತ್ರಿ 9 ಗಂಟೆ ಮೇಲೆ ವ್ಯಾಪಾರ ಆರಂಭವಾಗುತ್ತದೆ ಎಂದರು.
224 ಕ್ಷೇತ್ರ ನಮ್ಮ ಗುರಿ : ರಾಮನಗರ, ಚನ್ನಪಟ್ಟಣ ಕ್ಷೇತ್ರ ನಿಮಗೆ ಪ್ರತಿಷ್ಠೆಯೇ ಎಂಬ ಪ್ರಶ್ನೆಗೆ, ‘ನಮಗೆ ಕೇವಲ ರಾಮನಗರ ಹಾಗೂ ಚನ್ನಪಟ್ಟಣ ಮಾತ್ರವಲ್ಲ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ಎಲ್ಲ ಕ್ಷೇತ್ರಗಳು ನಮಗೆ ಪ್ರತಿಷ್ಠೆಯಾಗಿವೆ. ಸುರೇಶ್ ಅವರನ್ನು ಜನ ಲೋಕಸಭೆಗೆ ಆರಿಸಿ ಕಳುಹಿಸಿದ್ದಾರೆ. ಪಕ್ಷ ಈ ಬಗ್ಗೆ ತೀರ್ಮಾನ ಮಾಡಲಿದೆ. ತೀರ್ಮಾನ ಸುರೇಶ್ ಹಾಗೂ ಶಿವಕುಮಾರ್ ಅವರ ಕೈಯಲ್ಲಿಲ್ಲ, ಪಕ್ಷದ ಕೈಯಲ್ಲಿದೆ’ ಎಂದರು.
ಸದಸ್ಯತ್ವ ನೋಂದಣಿ : ಸದಸ್ಯತ್ವ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಲು ತೀರ್ಮಾನಿಸಲಾಗಿದೆ. 26ರೊಳಗಾಗಿ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಬೇಕಾಗಿದೆ. ಪ್ರತಿ ಜಿಲ್ಲಾ ಪಂಚಾಯತ್ ಹಾಗೂ ಮುನ್ಸಿಪಾಲಿಟಿ ವ್ಯಾಪ್ತಿಗೆ ಇಬ್ಬರ ನೇಮಕಕ್ಕೆ ಚರ್ಚಿಸುತ್ತಿದ್ದೇವೆ. ಸದಸ್ಯತ್ವ ನೋಂದಣಿ ವಿಚಾರವಾಗಿ ಜನರ ಬಳಿ ಫೋಟೋ ಕೇಳುವಾಗ ಗಂಡಸರು ಹೆಣ್ಣು ಮಕ್ಕಳ ಫೋಟೋ, ಹೆಂಗಸರು ಗಂಡು ಮಕ್ಕಳ ಫೋಟೋ ಕೇಳಲು ಆಗುವುದಿಲ್ಲ.
ಹೀಗಾಗಿ, ಇಂತಹ ವಿಚಾರಗಳನ್ನೆಲ್ಲಾ ಚರ್ಚಿಸಿ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಸದಸ್ಯತ್ವ ನೋಂದಣಿ ದಿನಾಂಕ ವಿಸ್ತರಣೆಯಾಗುವುದಿಲ್ಲ. ಪ್ರತಿಯೊಂದು ಚುನಾವಣೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್, ಎಐಸಿಸಿ ಮಟ್ಟದ ಚುನಾವಣೆಗಳು ನಡೆಯಲಿದ್ದು, ಅಲ್ಲಿ ಸದಸ್ಯರಿಗೆ ಮತದಾನ ಮಾಡುವ ಹಕ್ಕಿದೆ. ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ (ಕೇಡರ್ ಬೇಸ್) ಮಾಡುವ ಬಗ್ಗೆ ನಾನು ಪ್ರತಿಜ್ಞಾ ಕಾರ್ಯಕ್ರಮದಲ್ಲೇ ಹೇಳಿದ್ದೇನೆ’ ಎಂದರು.
ಪ್ರದರ್ಶನ ಉದ್ಘಾಟನೆ : ಖ್ಯಾತ ಸಾಮಾಜಿಕ ಕಾರ್ಯಕರ್ತೆ ಅಕ್ಕಯ್ ಪದ್ಮಶಾಲಿ ಅವರ ಜೀವನಾಧರಿತ ನಾಟಕ "ಅಕ್ಕಯ್" ಮೊದಲ ಪ್ರದರ್ಶನದ ಉದ್ಘಾಟನೆಗೆ ಆಗಮಿಸುವಂತೆ ಕಾಜಾಣ ಹಾಗೂ ರಂಗಪಯಣ ತಂಡದ ಪ್ರತಿನಿಧಿಗಳು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ, ಆಹ್ವಾನಿಸಿದರು. ರಂಗಭೂಮಿಯ ಪ್ರೊ. ಬೇಲೂರು ರಘುನಂದನ್, ನಯನಾ, ರಾಜಗುರು, ಜಿಪಿಒ ಚಂದ್ರು ಹಾಗೂ ಅಕ್ಕಯ್ ಪದ್ಮಶಾಲಿ ಮತ್ತಿತರರು ಇದ್ದರು.
ಓದಿ: ಅಧಿಕಾರಿಗಳು ಕಾನೂನು ಬಾಹಿರವಾಗಿ ವರ್ತಿಸಿ ಕಾಂಗ್ರೆಸ್ಗೆ ಅನ್ಯಾಯ ಮಾಡಿದ್ದಾರೆ: ಎಚ್ ಕೆ ಪಾಟೀಲ್