ಬೆಂಗಳೂರು: ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಹರ್ಷ ಹಾಗೂ ಚೇತನ್ ಬಂಧಿತರು. ಇವರಿಂದ 127 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ನಗರದ ರೇವಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಕಂಪ್ಯೂಟರ್ ಸೈನ್ಸ್ ಸೀಟು ಸಿಕ್ಕಿರಲಿಲ್ಲ. ಇದನ್ನರಿತ ಆರೋಪಿಗಳು ವಿದ್ಯಾರ್ಥಿನಿ ಮೊಬೈಲ್ಗೆ ಸೀಟು ಕೊಡಿಸುವುದಾಗಿ ಮೆಸೇಜ್ ಕಳುಹಿಸಿದ್ದರು. ಅದನ್ನು ನಂಬಿ ಸಂಪರ್ಕಿಸಿದ ವಿದ್ಯಾರ್ಥಿನಿ 1.27 ಲಕ್ಷ ರೂ ನೀಡಿದ್ದಾಳೆ. ಹಣ ಕೈಗೆ ಸೇರುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅನುಮಾನಗೊಂಡು ಕಾಲೇಜಿನಲ್ಲಿ ವಿಚಾರಿಸಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಕೆಲ ದಿನಗಳ ಹಿಂದೆ ರಾಜೇಶ್ವರ್ ಎಂಬುವನನ್ನು ಬಂಧಿಸಿದ್ದು, ವಿಚಾರಣೆ ವೇಳೆ ನೀಡಿದ ಸುಳಿವಿನ ಮೇರೆಗೆ ಮತ್ತಿಬ್ಬರನ್ನು ಬಂಧಿಸಿದ್ದಾರೆ.
ಇದೇ ಆರೋಪಿಗಳು ದಯಾನಂದ್ ಸಾಗರ್ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೂ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾರೆ. ಈ ಹಿಂದೆ ಏರ್ಟೆಲ್ ಎಕ್ಸಿಕ್ಯೂಟಿವ್ ಆಗಿದ್ದ ಆರೋಪಿಗಳು ತಮ್ಮ ಬಳಿ ಸಿಮ್ ಕಾರ್ಡ್ ಖರೀದಿಗಾಗಿ ಬರುವ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಫಾರಂಗಳಿಗೆ ಸಹಿ ಹಾಕಿಸಿಕೊಂಡು ಹೆಚ್ಚುವರಿಯಾಗಿ ಫೋಟೊಗಳನ್ನು ಪಡೆಯುತ್ತಿದ್ದರು. ಬಳಿಕ ಸೈಬರ್ ಖದೀಮರಿಗೆ ಸಿಮ್ಗಳನ್ನ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ನಟಿ ಸಂಜನಾಗೆ ತಡರಾತ್ರಿ ಅಶ್ಲೀಲ ಮೆಸೇಜ್ ಕಳಿಸಿದ ಆರೋಪ; ಫ್ಯಾಷನ್ ಡಿಸೈನರ್ ಪುತ್ರ ಅರೆಸ್ಟ್