ಬೆಂಗಳೂರು: ಕೊರಿಯರ್ ಕಂಪನಿ ಹಾಗೂ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದ ಅಧಿಕಾರಿಗಳೆಂದು ನಂಬಿಸಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್‌ಸಿ) ಹಿರಿಯ ಪ್ರಾಧ್ಯಾಪಕಿಯೊಬ್ಬರಿಗೆ ಫೋನ್ ಕರೆ ಮಾಡಿ, ಅವರ ಬ್ಯಾಂಕ್ ಖಾತೆಯಿಂದ 83 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕಿ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಡೆದಿದ್ದೇನು?: ಡಿಸೆಂಬರ್ 15ರಂದು ಸಂಜೆ ದೂರುದಾರರಿಗೆ ಖಾಸಗಿ ಕೊರಿಯರ್ ಕಂಪನಿ ಪ್ರತಿನಿಧಿಯ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿ, "ನೀವು ಕಳುಹಿಸಿರುವ ನಿಷೇಧಿತ ಪದಾರ್ಥಗಳಿರುವ ಕೊರಿಯರ್" ಅನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಕರೆ ಮಾಡಿದ್ದ ಮತ್ತೊಬ್ಬ, "ನಿಮ್ಮ ವಿರುದ್ಧ ಮುಂಬೈನಲ್ಲಿ ಎನ್‌ಡಿಪಿಎಸ್ (ಮಾದಕ ಪದಾರ್ಥ ಮತ್ತಿತರ ಉಪ ಉತ್ಪನ್ನಗಳ ನಿಗ್ರಹ ಕಾಯ್ದೆ) ಹಾಗೂ ಪಿಎಂಎಲ್ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎನ್‌ಸಿಬಿಯಲ್ಲಿ ನಿಮ್ಮನ್ನು ವಿಚಾರಣೆಗೊಳಪಡಿಸಬೇಕಿದೆ" ಎಂದಿದ್ದಾನೆ. ಅಲ್ಲದೇ, "ನೀವು ಅನಧಿಕೃತವಾಗಿ ಬ್ಯಾಂಕ್ ಖಾತೆಗಳನ್ನು ಹೊಂದಿರುವುದರಿಂದ ಆರ್‌ಬಿಐನಿಂದ ವಿಚಾರಣೆ ಮಾಡಬೇಕಿದೆ. ಅದಕ್ಕಾಗಿ ನೀವು ಹಣವನ್ನು ಆರ್‌ಬಿಐಗೆ ಲಿಂಕ್ ಆಗಿರುವ ಸೀಕ್ರೆಟ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಬೇಕು" ಎಂದಿದ್ದನು.
ಆರೋಪಿಯ ಮಾತು ನಿಜವೆಂದು ನಂಬಿದ್ದ ದೂರುದಾರರು ಅವರು ಹೇಳಿದಂತೆ ಹಂತಹಂತವಾಗಿ ಆರು ಬಾರಿ ಒಟ್ಟು 83 ಲಕ್ಷ ರೂ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯ ನಂತರ ವಂಚಕರು ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದು, ಮೋಸ ಹೋಗಿರುವುದು ದೂರುದಾರರಿಗೆ ಅರಿವಾಗಿದೆ. ದೂರಿನನ್ವಯ ಸದಾಶಿವನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.
ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ: ಮೈಕ್ರೋ ಫೈನಾನ್ಸ್ ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹಾವೇರಿ ಜಿಲ್ಲೆಯ ಹಿರೇಕೆರೂರರಲ್ಲಿ ಕೇಳಿಬಂದಿದೆ. ವಿದ್ಯಾ ನಗರದಲ್ಲಿರುವ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಭಾರ ಕೇಂದ್ರ ವ್ಯವಸ್ಥಾಪಕ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಜೊತೆಗೂಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಮಹಿಳಾ ಗ್ರಾಹಕರಿಗೆ ಸಂಬಂಧಿಸಿದ 3.38 ಕೋಟಿ ರೂಪಾಯಿ ವಂಚನೆಯನ್ನು ಈ ಇಬ್ಬರು ಸಿಬ್ಬಂದಿ ಮಾಡಿರುವ ಆರೋಪದಡಿ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾರ ಕೇಂದ್ರ ವ್ಯವಸ್ಥಾಪಕ ಶಿವಾನಂದಪ್ಪ ದ್ಯಾವನಕಟ್ಟೆ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಬಸವರಾಜಯ್ಯ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂಓದಿ: ಹಣ, ಮೊಬೈಲ್ ಫೋನ್ ಸುಲಿಗೆ; ನಾಲ್ವರು ಬಾಲಕರು ಸೇರಿ ಐವರ ಬಂಧನ