ಬೆಂಗಳೂರು: ಊಟಕ್ಕೆ ಬಂದ ಗ್ರಾಹಕರ ಮೇಲೆ ಸಪ್ಲೈಯರ್ಸ್, ಮ್ಯಾನೇಜರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಎಂಪೈರ್ ಹೋಟೆಲ್ಗೆ ಶನಿವಾರ ರಾತ್ರಿ 1 ಗಂಟೆ ಸುಮಾರಿಗೆ ಅಭಿಷೇಕ್, ಅನೀಶ್, ಜಾನ್ಸನ್ ಎಂಬುವವರು ಊಟಕ್ಕೆ ಬಂದಿದ್ದರು. ಈ ವೇಳೆ ಚಿಕನ್ ಆರ್ಡರ್ ಮಾಡಿದ್ದರು. ಆದರೆ ಹೋಟೆಲ್ ನವರು ಚಿಕನ್ ಕೊಟ್ಟಾಗ ಪೀಸ್ಗಳು ಕಮ್ಮಿ ಇದ್ದವಂತೆ.

ಹೀಗಾಗಿ ಜಾನ್ಸನ್ ಎಂಬಾತ ಚಿಕನ್ ಪೀಸ್ ಕಡಿಮೆ ಕೊಟ್ಟು ಬಿಲ್ ಜಾಸ್ತಿ ಕೊಟ್ಟಿದ್ದೀರಾ. ಇದು ಸರಿಯಲ್ಲ ಎಂದಿದ್ದಾನೆ. ಇದಕ್ಕೆ ಎಂಪೈರ್ ಹೋಟೆಲ್ ಸಿಬ್ಬಂದಿ ಮತ್ತು ಊಟಕ್ಕೆ ಬಂದ ಮೂವರ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಎಂಪೈರ್ ಹೋಟೆಲ್ ಸಿಬ್ಬಂದಿ ಸ್ಟೀಲ್ ಜಗ್, ರಾಡ್ಗಳಿಂದ ಊಟಕ್ಕೆ ಬಂದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಘಟನೆಯಲ್ಲಿ ಅಭಿಷೇಕ್ ಎಂಬಾತನ ತಲೆಗೆ ಗಂಭೀರ ಗಾಯವಾಗಿದೆ.
ಘಟನೆ ಸಂಬಂಧ ಹಲ್ಲೆಗೊಳಗಾದವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಎಂಪೈರ್ ಹೋಟೆಲ್ ಮ್ಯಾನೇಜರ್ ಬಳಿ ಕೇಳಿದ್ರೆ, ಸಣ್ಣ-ಪುಟ್ಟ ಇಂತಹ ಘಟನೆಗಳು ಆಗುತ್ತವೆ. ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತೇವೆ. ನಾವು ಸಮಸ್ಯೆಯನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಯರ ಹೆಸರಲ್ಲಿ ವಂಚನೆ: ಭಕ್ತರಿಗೆ ಮಠದ ವ್ಯವಸ್ಥಾಪಕರಿಂದ ಎಚ್ಚರಿಕೆ