ಬೆಂಗಳೂರು: ದೇಶದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ, ಆ ಸೂಕ್ಷ್ಮತೆ ನನಗೆ ಇದೆ ನಾನು ದೇಶದ ಹಿತಕ್ಕಾಗಿ ಮಾತ್ರ ಚಿಂತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತನಲ್ಲ. ದೇಶದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ವೈಯುಕ್ತಿಕ ಏಳಿಗೆ ಬಯಸಿದ್ದರೆ ನಾನು ಸಚಿವ ಸ್ಥಾನ ಬಿಟ್ಟು ಸಂಘಟನೆಗೆ ಹೋಗುತ್ತಿರಲಿಲ್ಲ ಎಂದರು.
ಈ ದೇಶ ಒಂದು ಕುಟುಂಬದ ಆಸ್ತಿಯಲ್ಲ, ಎಲ್ಲದಕ್ಕೂ ಒಂದು ಕುಟುಂಬದವರ ಹೆಸರೇ ಇಟ್ಟಿದ್ದಾರೆ. ದೇಶದಲ್ಲಿ ಇವರನ್ನು ಬಿಟ್ಟು ಬೇರೆ ಯಾರೂ ಹೋರಾಟ ಮಾಡಿಲ್ಲವಾ? ಎಲ್ಲ ಯೋಜನೆಗಳಿಗೆ ಒಂದೇ ಕುಟುಂಬದ ಹೆಸರು ಯಾಕೆ ?ಬೇರೆಯವರಿಗೂ ಕೂಡ ನ್ಯಾಯ ಕೊಡಬೇಕು. ರಾಜಸ್ಥಾನದಲ್ಲಿ ಅನ್ನಪೂರ್ಣೇಶ್ವರಿ ಬದಲು ಇಂದಿರಾ ರಸೋಯಿ ಮಾಡಿದರು. ಅನ್ನದ ಅಭಿಮಾನ ದೇವತೆ ಹೆಸರು ಬದಲಿಸಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಅದನ್ನು ನೋಡಿಕೊಳ್ಳುತ್ತಾರೆ, ಎಂ ಪಿ ಕುಮಾರಸ್ವಾಮಿ ನಮಗಿಂತ ಸೂಕ್ಷ್ಮ, ಸೂಕ್ಷ್ಮವಾಗಿ ಅವರು ವ್ಯವಹರಿಸುತ್ತಾರೆ ಅವರು ಬುದ್ಧಿವಂತರಿದ್ದಾರೆ ಎಂದರು.
ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರ ಕುರಿತು ನಾನು ಉತ್ತರ ನೀಡಲು ಆಗಲ್ಲ, ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ, ಉತ್ತಮ ಆಡಳಿತ ಕೊಡುತ್ತಿದ್ದಾರೆ, ಎಲ್ಲವನ್ನೂ ಅವರೇ ಸರಿಪಡಿಸುತ್ತಾರೆ ಎಂದರು.