ಬೆಂಗಳೂರು: ಅತಿಯಾದ ಆತ್ಮವಿಶ್ವಾಸ, ಹೊಸ ಪ್ರಯೋಗ ಸೋಲಿಗೆ ಕಾರಣವಾಯಿತು. ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವುದಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಸೋಲಿನ ಕಾರಣಗಳನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸಿ.ಟಿ.ರವಿ ತಿಳಿಸಿದರು.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾವು ಕೆಲಸ ಮಾಡಿಲ್ಲ ಅಂತ ಸೋತಿಲ್ಲ. ಸುಳ್ಳು ಸುದ್ದಿ ಹಾಗೂ ಹಣ ಕೊಟ್ಟು ಮಾಡಿಸಿದ ಸುದ್ದಿ ಈ ರೀತಿಯ ಫಲಿತಾಂಶ ಕೊಟ್ಟಿದೆ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ನಾವು ಸತ್ತಿಲ್ಲ ಎಂದು ಕಾರ್ಯಕರ್ತರು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರು. ಪಕ್ಷ ಸಂಘಟನೆಗಾಗಿ ಸದಾ ಮುಂದಿರುತ್ತೇನೆ." ಎಂದರು.
ಪಕ್ಷ ಮುಖ್ಯ, ವೈಯಕ್ತಿಕ ಹಿತಾಸಕ್ತಿ ಇಲ್ಲ: "ರಾಷ್ಟ್ರೀಯ ಜವಾಬ್ದಾರಿ ಸಿಕ್ಕಮೇಲೆ ಕ್ಷೇತ್ರದ ಕಡೆ ಓಡಾಟ ಕಡಿಮೆ ಆಯ್ತು. ಪರಿಸ್ಥಿತಿಯ ಪಿತೂರಿಯೂ ಆಗಿರಬಹುದು. ನಾನು ಯಾರ ಮೇಲೂ ಬೊಟ್ಟು ಮಾಡುವುದಿಲ್ಲ. ನಿರಂತರವಾಗಿ ಗೆಲ್ಲುವುದೊಂದೇ ನಾಯಕನ ಲಕ್ಷಣ ಅಲ್ಲ. ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡೋಕೆ ನನಗೆ ಬರಲ್ಲ. ಹಾಗೆ ಮಾಡೋದಿದ್ದರೆ ನಾನು ಮಾಡಬಹುದಿತ್ತು. ಸಿದ್ಧಾಂತ, ಪಕ್ಷ ಮುಖ್ಯ. ವೈಯಕ್ತಿಕ ಹಿತಾಸಕ್ತಿ ಇಲ್ಲ. ನಿರಂತರವಾಗಿ ಗೆದ್ದವರು ಮಾತ್ರವೇ ನಾಯಕರಲ್ಲ. ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಯಾದವರು ಇದ್ದಾರೆ. ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸೋಲು ಸ್ವೀಕಾರ ಮಾಡುತ್ತೇವೆ ಎಂದ ಸಿಟಿ ರವಿ ಮತ್ತು ಡಾ ಸುಧಾಕರ್
"ನಮ್ಮ ಕಾರ್ಯಕರ್ತರಲ್ಲಿ ರವಿ ಅಣ್ಣನನ್ನು ಸೋಲಿಸುವವರು ಯಾರಿದ್ದಾರೆ ಎಂಬ ಭಾವನೆ ಕೂಡ ಸೋಲಿಗೆ ಕಾರಣವಾಯಿತು. ಲಾಭ ಆಗುತ್ತದೆ ಅಂತ ತೆಗೆದುಕೊಂಡ ನಿರ್ಧಾರಗಳು ನಷ್ಟ ಉಂಟುಮಾಡಿವೆ" ಎಂದರು.
"ಸೋಲನ್ನು ಸಮಚಿತ್ತವಾಗಿ ಸ್ವೀಕಾರ ಮಾಡಿದ್ದೇನೆ. ಇದನ್ನೇ ನನಗೆ ಸಂಘ ಹೇಳಿದ್ದು. ಅವರಿಗೆ ಗೆದ್ದಿರುವ ಅಮಲು ಇದೆ. ಈಗ ಕಾಂಗ್ರೆಸ್ ಶಾಸಕರು ಏನು ಬೇಕಾದರೂ ಮಾತನಾಡುತ್ತಾರೆ. ಅಮಲು ಇಳೀಲಿ ಆಮೇಲೆ ಏನು ಮಾತಾಡ್ತಾರೆ ನೋಡೋಣ. ರಾಜ್ಯದಲ್ಲಿ ಜನರು ಗ್ಯಾರಂಟಿ ಕಾರ್ಡ್ ನಂಬಿದ್ದಾರೆ. ಮೋದಿ ಕೊಟ್ಟಿರುವ ಯೋಜನೆ ಮರೆತಿದ್ದಾರೆ. ನೋಡೋಣ, ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಕಾರ್ಡ್ ಜನರಿಗೆ ಸಿಗುತ್ತಾ ಅಂತಾ?. ಈಗಲೇ ಮಾತನಾಡಿದರೆ ತಪ್ಪಾಗುತ್ತದೆ" ಎಂದು ಹೇಳಿದರು.
ಸಿ.ಟಿ.ರವಿ ಅವರಿಗೆ ಪ್ರಬಲ ಹುದ್ದೆ ಸಿಗುತ್ತಾ ಎಂಬ ಪ್ರಶ್ನೆಗೆ, "ಈಗಾಗಲೇ ನಾನು ಪ್ರಬಲ ಹುದ್ದೆಯಲ್ಲಿ ಇದ್ದೇನೆ. ಮತ್ಯಾವ ಹುದ್ದೆ ಮೇಲೂ ಆಕಾಂಕ್ಷೆ/ ಅಪೇಕ್ಷೆ ಇಟ್ಟುಕೊಳ್ಳುವುದು ನನ್ನ ಜಾಯಮಾನ ಅಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಬೀದಿಯಲ್ಲಿ ಪ್ರತಿಭಟನೆ ಮಾಡಿದ್ರೆ ತೀರ್ಪು ಬದಲಾಗಲ್ಲ: ಕಾಂಗ್ರೆಸ್ ನಡೆಗೆ ಕಿಡಿಕಾರಿದ ಸಿಟಿ ರವಿ