ಬೆಂಗಳೂರು: "ಸ್ವತಃ ಹೆಚ್ಡಿ ಕುಮಾರಸ್ವಾಮಿಗೆ ತಾನು ಯಾರು ಅಂತ ಗೊತ್ತಿಲ್ಲ. ಇನ್ನು, ಪ್ರಹ್ಲಾದ್ ಜೋಶಿ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ?" ಎಂದು ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಪ್ರಹ್ಲಾದ್ ಜೋಶಿ ಪೇಶ್ವೆಯಲ್ಲ. ಅದು ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಅವರ್ಯಾರು ಅಂತಾನೇ ಗೊತ್ತಿಲ್ಲ. ಇನ್ನು ಪ್ರಹ್ಲಾದ್ ಜೋಶಿ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ? ಕುಮಾರಸ್ವಾಮಿ ಯಾವಾಗ ಬೇಕಾದರೂ ಯೂಟರ್ನ್ ಹೊಡಿತಾರೆ. ನನಗೊಂದು ವಾಟ್ಸಾಪ್ ಸಂದೇಶ ಬಂದಿತ್ತು. ಜಿ.ಟಿ ದೇವೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ರು. ಅವನೊಂದಿಗಿದ್ದ ಜೆಡಿಎಸ್ ಸಂಬಂಧ ಮುಗಿದಿದೆ ಅಂತ ಏಕವಚನದಲ್ಲಿ ಮಾತನಾಡಿದ್ರು" ಎಂದು ತಿರುಗೇಟು ನೀಡಿದರು.
"ನಮಗೆ ಯಡಿಯೂರಪ್ಪ ಬಗ್ಗೆ ಮರುಕ ಹುಟ್ಟಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು. ಬಹಳ ಸಂತೋಷ, ಯಡಿಯೂರಪ್ಪ ಒಬ್ಬರು ಮಾಸ್ ಲೀಡರ್. ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರನ್ನು ಸಿಎಂ ಅಗಲು ನೀವು ಬಿಡಲೇ ಇಲ್ಲ. ಈಗ ಯಾಕೆ ಮೊಸಳೆ ಕಣ್ಣೀರು ಹಾಕ್ತೀರಾ? ಮರುಕದ ಮಾತನಾಡಿ ನಾಟಕ ಆಡ್ತಿದ್ದೀರಾ? ಕುಮಾರಸ್ವಾಮಿ ಹೇಳಿಕೆ ನೋಡಿದ್ರೆ ಇವರೇ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದಾರೆ ಅಂತಾನೇ ಜನರು ಅಂದುಕೊಳ್ಳಬೇಕು. ಆ ರೀತಿಯಾಗಿ ಸಿಂಪತಿ ತೋರಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಬಾರದು ಅಂತ ತಡೆದಿದ್ದೇ ಕಾಂಗ್ರೆಸ್ ಮತ್ತು ಜೆಡಿಎಸ್. ಇದು ರಾಜಕೀಯ ತಂತ್ರಗಾರಿಕೆಯ ಒಂದು ಭಾಗ" ಎಂದು ಕಿಡಿಕಾರಿದರು.
ಇದನ್ನೂ ಓದಿ: 'ಎಲ್ಲ ಟೈಮಲ್ಲೂ ಲಾಟರಿ ಹೊಡೆಯುತ್ತದೆಂದು ಭಾವಿಸಬೇಡಿ': ಹೆಚ್‌ಡಿಕೆ ಕುರಿತು ಸಿ.ಟಿ.ರವಿ ವ್ಯಂಗ್ಯ
'ಮುಂದೆ ನಾವೇ ಸರ್ಕಾರ ಮಾಡ್ತೀವಿ' ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಅತಿಯಾದ ವಿಶ್ವಾಸ ಎಂದಿಗೂ ಒಳ್ಳೆಯದಲ್ಲ. ನೀವು 2018, 2019ರ ಚುನಾವಣೆಯಲ್ಲಿ ಅತಿಯಾದ ವಿಶ್ವಾಸ ತೋರಿದ್ದರಿಂದ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು? ನೀವು ವಿಶ್ವಾಸ ಇಟ್ಟುಕೊಂಡೇ ಎದುರಿಸಿದ ಚುನಾವಣೆಯಲ್ಲಿ ಸೋತಿದ್ದೀರ. ಈ ಬಾರಿಯೂ ಅದೇ ಆಗುತ್ತದೆ" ಎಂದರು.
'ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರಾ..?': ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರಾ? ಎಂಬ ಮಾಧ್ಯಮದ ಪ್ರಶ್ನೆಗೆ ಉ್ತತರಿಸಿದ ಅವರು, "ರಾಜ್ಯದ ಜನತೆ ಯಾರು ಸಿಎಂ ಆಗಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಕುಮಾರಸ್ವಾಮಿ ಅವರು ರಾಜಕೀಯ ತಂತ್ರಗಾರಿಕೆ ಮಾಡಲು ಈ ರೀತಿಯ ಹೇಳಿಕೆಯನ್ನು ಕೊಡ್ತಾರೆ. ಎಲ್ಲರೂ ನೇರ ಯುದ್ಧ ಮಾಡಿದ್ರೆ, ಕುಮಾರಸ್ವಾಮಿ ಅವರು ಮಾತ್ರ ಮಾಯ ಯುದ್ಧ ಮಾಡ್ತಿದ್ದಾರೆ." ಎಂದು ಗುಡುಗಿದರು.
'ಪಕ್ಷದಲ್ಲಿ ಕೆಲವರು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡ್ತಿದ್ದಾರಾ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ಪಕ್ಷದ ವಿಚಾರ ಬಂದಾಗ ನಮ್ಮಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ಇಲ್ಲ. ಪಕ್ಷದ ನೀತಿ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆ. ವೈಯಕ್ತಿಕ ನೆಲೆಯ ರಾಜಕಾರಣ ಮಾಡುವವರು ಕೆಲವರಿದ್ದಾರೆ. ನಾನು ಒಬ್ಬರು ಗೆದ್ದರೆ ಸಾಕು ಎನ್ನುವ ಮನಸ್ಥಿತಿಯವರು ಇದ್ದಾರೆ" ಎಂದು ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ: ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ; ಮೊದಲ ದಿನವೇ ಕಲಾಪಕ್ಕೆ ಗೈರಾದ ಪ್ರತಿಪಕ್ಷ ನಾಯಕ