ಬೆಂಗಳೂರು : ಸಚಿವ ಸ್ಥಾನ ತ್ಯಾಗ ಮಾಡಿ ಸಂಘಟನೆಯ ಜವಾಬ್ದಾರಿ ನಿರ್ವಹಿಸಲು ಮುಂದಾಗಿರುವ ಸಚಿವ ಸಿ ಟಿ ರವಿಗೆ ಬಿಜೆಪಿ ಹೈಕಮಾಂಡ್ ದಕ್ಷಿಣ ಭಾರತ ಬಿಜೆಪಿ ಹಂಗಾಮಿ ಉಸ್ತುವಾರಿಯನ್ನಾಗಿ ನೇಮಿಸಲು ನಿರ್ಧರಿಸಿದೆ.
ಸಂಜೆ ಅಥವಾ ನಾಳೆ ಈ ನಿರ್ಧಾರ ಹೊರ ಬೀಳಲಿದೆ. ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಚಿವ ಸಿ ಟಿ ರವಿ ಅವರನ್ನು, ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಹಂಗಾಮಿಯಾಗಿ ರಾಜ್ಯ ಉಸ್ತುವಾರಿಯನ್ನಾಗಿ ನೇಮಿಸುವ ನಿರ್ಧಾರವನ್ನು ಹೈಕಮಾಂಡ್ ಕೈಗೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನಿನ್ನೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿಗಳ ನೇಮಕ ಮಾಡುವ ಪ್ರಸ್ತಾಪ ಬಂದಿತ್ತು. ಹೊಸದಾಗಿ ರಾಷ್ಟ್ರೀಯ ಸಂಘಟನೆಗೆ ಪ್ರವೇಶ ಮಾಡಿರುವ ಸಿ ಟಿ ರವಿ ಹೆಗಲಿಗೆ ಮಹತ್ವದ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆಯಿತು. ಬಿಹಾರ ಚುನಾವಣೆ ಮುಗಿಯುವವರೆಗೂ ಸಿ ಟಿ ರವಿ ಅವರು ಹಿಂದಿ ಪ್ರಾಬಲ್ಯ ಇಲ್ಲದ, ಪ್ರಾದೇಶಿಕ ಅಸ್ಮಿತೆಯ ಪ್ರಭಾವ ಹೆಚ್ಚಿರುವ ದಕ್ಷಿಣ ಭಾರತ ರಾಜ್ಯಗಳಿಗೆ ಹಂಗಾಮಿ ರಾಜ್ಯ ಉಸ್ತುವಾರಿಯನ್ನಾಗಿ ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ರಾಷ್ಟ್ರೀಯ ಪ್ರ. ಕಾರ್ಯದರ್ಶಿಯಾಗಿ ಇನ್ನೂ ಕೆಲವರು ನೇಮಕಗೊಳ್ಳಬೇಕಿದೆ. ಆನಂತರ ಹೊಸ ಪೂರ್ಣಾವಧಿ ರಾಜ್ಯ ಉಸ್ತುವಾರಿಗಳ ನೇಮಕ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈಗಾಗಲೇ ನೆರೆಯ ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವವಿರುವ ಸಚಿವ ಸಿ ಟಿ ರವಿ ಹೆಗಲಿಗೆ ತಾತ್ಕಾಲಿಕ ಜವಾಬ್ದಾರಿ ವಹಿಸಲಾಗುತ್ತಿದೆ. ಇದರಲ್ಲಿ ಅವರು ಎಷ್ಟರಮಟ್ಟಿಗೆ ಸಫಲರಾಗಲಿದ್ದಾರೆ, ವರಿಷ್ಠರ ಗಮನ ಸೆಳೆಯಲಿದ್ದಾರೆ ಕಾದು ನೋಡಬೇಕಿದೆ.
ಸದ್ಯ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ಮುರುಳೀಧರ ರಾವ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೈಕಮಾಂಡ್ ಆದೇಶ ಹೊರ ಬೀಳುತ್ತಿದ್ದಂತೆ ಅದು ಸಿ ಟಿ ರವಿ ಹೆಗಲಿಗೆ ಬೀಳಲಿದೆ. ರಾಜ್ಯದವರೇ ಪಕ್ಷದ ರಾಜ್ಯ ಉಸ್ತುವಾರಿಯಾಗುತ್ತಿರುವುದು ಕರ್ನಾಟಕ ಬಿಜೆಪಿಯಲ್ಲಿ ಬಹುಶಃ ಇದೇ ಮೊದಲು ಎನ್ನಲಾಗುತ್ತಿದೆ.