ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ (ಸಿಎಸ್ಐಟಿಎ) ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಂಸ್ಥೆಯ ಆಸ್ತಿ ಮುಟ್ಟುಗೋಲಿಗೆ ಮುಂದಾಗಿರುವ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಸಿಎಸ್ಐಟಿಎ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ:
ರಕ್ಷಣಾ ಇಲಾಖೆಗೆ ಸೇರಿರುವ ಜಾಗವನ್ನು ಟ್ರಸ್ಟ್ನವರು ಮೆಟ್ರೋಗೆ ನೀಡಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ರಕ್ಷಣಾ ಅಧಿಕಾರಿಗಳ ವಿರುದ್ಧ 2019ರ ಆಗಸ್ಟ್ 17ರಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಕಳೆದ ಸೆಪ್ಟೆಂಬರ್ 8 ರಂದು ಸಿಎಸ್ಐಟಿಎ ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಿತ್ತು.
ಆಲ್ ಸೇಂಟ್ಸ್ ಚರ್ಚ್ಗೆ ಸೇರಿದ್ದು ಎನ್ನಲಾದ ಜಾಗವನ್ನು ನಮ್ಮ ಮೆಟ್ರೋ ಯೋಜನೆಗಾಗಿ 2017 ರಲ್ಲಿ ಕೆಐಎಡಿಬಿ ವಶಪಡಿಸಿಕೊಂಡಿತ್ತು. ಅದಕ್ಕೆ ಟ್ರಸ್ಟ್ ಮಂಡಳಿಯಿಂದ ಪರಿಹಾರ ಮೊತ್ತ ಪಡೆದುಕೊಂಡಿತ್ತು. ಆದರೆ ಇದೀಗ ಜಾಗ ಮೂಲತಃ ರಕ್ಷಣಾ ಇಲಾಖೆಗೆ ಸೇರಿತ್ತು ಎನ್ನಲಾಗುತ್ತಿದೆ.