ಬೆಂಗಳೂರು : ವಿಧಾನಸೌಧದ ಪೂರ್ವ ದ್ವಾರದ ವಿಧಾನಸಭೆ ಸಭಾಂಗಣಕ್ಕೆ ತೆರಳುವ ಲಾಂಜ್ ಬಳಿ ಕಾಗೆಯೊಂದು ಕಾಣಿಸಿಕೊಂಡಿರುವುದು, ಆಸ್ತಿಕರಲ್ಲಿ ಸಾಕಷ್ಟು ಚರ್ಚೆ ಮೂಡುವಂತೆ ಮಾಡಿದೆ.
ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ನಡೆಯುತ್ತಿರುವಾಗ, ಸದನ ಮುಂದೂಡಲು ಕೆಲ ಸಮಯ ಉಳಿದಿರುವಂತೆ ಕಾಗೆಯೊಂದು ಲಾಂಜ್ ಬಳಿ ಅರ್ಧಗಂಟೆಗೂ ಹೆಚ್ಚು ಕಾಲ ಕಿರುಚುತ್ತಾ ಅತ್ತಿತ್ತ ಹಾರಾಡಿ ಗಮನಸೆಳೆಯಿತು. ಕಾಗೆ ಬಂದು ಕುಳಿತದ್ದು ಶುಭವೋ- ಅಶುಭವೋ ಎನ್ನುವ ಚರ್ಚೆ ಕೂಡ ನಡೆಯಿತು.
ಕೆಲವರು ಸರ್ಕಾರಕ್ಕೆ ಅಪಶಕುನ ಎಂದು ಹೇಳಿದರೆ, ಮತ್ತೆ ಕೆಲವರು ಇಂಥದ್ದನ್ನು ನಂಬಿ ಅನಗತ್ಯ ಚರ್ಚೆ ಮಾಡುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ 14 ತಿಂಗಳು ಅಧಿಕಾರ ನಡೆಸಿದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬಹುತೇಕ ಪತನದ ಅಂಚಿನಲ್ಲಿದ್ದ ಸಂದರ್ಭ ಇದೇ ಪೂರ್ವ ದ್ವಾರದ ಲಾಂಜ್ ಆವರಣದಲ್ಲಿ ಜೋಡಿ ಕಾಗೆಗಳು ಹಾರಾಡಿ, ಕಿರುಚಾಡಿ ಗಮನ ಸೆಳೆದಿದ್ದವು. ಇವುಗಳ ಆಗಮನ ಕಂಡ ಕೆಲವರು ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.
ಕಾಕತಾಳಿಯ ಎಂಬಂತೆ ಬಹುಮತ ಸಾಬೀತು ಪಡಿಸಲಾಗಿದೆ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಆದರೆ, ಇದೀಗ ಮತ್ತೆ ಕಾಗೆ ಕಾಣಿಸಿಕೊಂಡು ಕುತೂಹಲದ ಕೇಂದ್ರವಾಗಿ ಪರಿಣಮಿಸಿದೆ. ಜೋಡಿ ಕಾಗೆ ಕಾಣಿಸಿಕೊಂಡು ಮೈತ್ರಿ ಸರ್ಕಾರ ಪಥನಕ್ಕೆ ಕಾರಣವಾಗಿದ್ದವು. ಇದೀಗ ಒಂಟಿ ಕಾಗೆ ಆಗಮಿಸಿದ್ದು ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಏನಾದರೂ ಕಾಡುತ್ತಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.