ಬೆಂಗಳೂರು : ಬೆಳೆ ವಿಮೆಗೆ ನೋಂದಾಯಿತ ಅರ್ಹ ಫಲಾನುಭವಿಗಳು ಮರಣ ಹೊಂದಿದಲ್ಲಿ ಆ ರೈತರುಗಳ ಬೆಳೆವಿಮೆ ಪರಿಹಾರವನ್ನು ಸರಿಯಾದ ವಾರಸುದಾರರಿಗೆ (ನಾಮಿನಿ) ಪಾವತಿಸುವ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಬೇಕು ಹಾಗೂ ನೋಂದಣಿ ಸಮಯದಲ್ಲಿಯೇ ನಾಮಿನಿಯ ಹೆಸರನ್ನು ಸೇರಿಸುವ ಕಾರ್ಯ ತಂತ್ರಾಂಶದ ಮೂಲಕವೇ ಆಗಬೇಕೆಂದು ಕೃಷಿ ಸಚಿವ ಬಿ ಸಿ ಪಾಟೀಲ್ ಸೂಚಿಸಿದ್ದಾರೆ.
ಕೃಷಿ ಸಚಿವ ಬಿ ಸಿ ಪಾಟೀಲ್ ಹೆಬ್ಬಾಳದ ಬೀಜ ನಿಗಮ ಕಚೇರಿಯಲ್ಲಿ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಿಮಾ ಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಸ್ವಂತ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಕಡ್ಡಾಯವಾಗಿ ಎಲ್ಲಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ (Help Desk)ಯನ್ನು ಸ್ಥಾಪಿಸಿ, ರೈತರಿಗೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಕುರಿತು ಜಾಗೃತಿ ಮೂಡಿಸಬೇಕು. ವಿಮಾ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಬೇಕೆಂದು ವಿಮಾ ಕಂಪನಿಗಳಿಗೆ ಸಚಿವರು ಖಡಕ್ ಸೂಚನೆ ನೀಡಿದರು.
ಅಲ್ಲದೇ ಸಭೆಯಲ್ಲಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಹಾಗೂ NPCI Active ಇರುವುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಎಲ್ಲಾ ಬ್ಯಾಂಕುಗಳಿಗೆ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಸೂಚಿಸಿದರು.
ಇದನ್ನೂ ಓದಿ: ಒಡಕಿನ ದನಿ ಲಾಭವಾಗಿಸಿಕೊಳ್ಳಲು ಜೆಡಿಎಸ್ ತಂತ್ರ.. ಅಲ್ಪಸಂಖ್ಯಾತ ಮುಖಂಡರಿಗೆ 'ತೆನೆ' ಗಾಳ!?
ನಿಗದಿಯಾದ ಎಸ್‌ಎಲ್‌ಬಿಎಸ್(SLBC) ಬ್ಯಾಂಕರ್ಗಳ ಸಭೆಯಲ್ಲಿ NPCIನಿಂದ ವಿಫಲವಾದ ಬೆಳೆ ವಿಮೆಯ ಪರಿಹಾರ ಮೊತ್ತ ಇತ್ಯರ್ಥ ಪ್ರಕರಣಗಳ ಕುರಿತು ಹಾಗೂ ಬೆಳೆ ಸಮೀಕ್ಷೆಯ ತಾಳೆಯಾಗದ ಪ್ರಕರಣಗಳ ಪರಿಶೀಲನಾ ಕಾರ್ಯವನ್ನು ಅತೀ ಶೀಘ್ರ ಕೈಗೊಳ್ಳಲು ಸೂಕ್ತ ಸಲಹೆಗಳನ್ನು ಎಲ್ಲಾ ಕೆಳಹಂತದ ಬ್ಯಾಂಕ್ ಶಾಖೆಗಳಿಗೆ ನಿರ್ದೇಶನ ನೀಡಬೇಕು.
NPCI ನಿಂದ ಬೆಳೆ ವಿಮೆ ಪರಿಹಾರ ಮೊತ್ತ ಇತ್ಯರ್ಥ ವಿಳಂಬವಿಲ್ಲದೇ ಪಾವತಿಸಲು ಬೇಕಾದ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು SLBC ರವರಿಗೆ ಬಿ.ಸಿ.ಪಾಟೀಲ್ ಹೇಳಿದರು.
2022-23ರ ಮುಂಗಾರು ಹಂಗಾಮಿನಿಂದ ಕಡ್ಡಾಯವಾಗಿ ಬೆಳೆ ಸಮೀಕ್ಷೆಯನ್ನು ರೈತರೇ ಸ್ವತಃ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದ ಸಚಿವರು, NPCIನಿಂದ ಬೆಳೆ ವಿಮೆ ಪರಿಹಾರ ಪಾವತಿಸಲು ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಕುರಿತು ವಿಮಾ ಸಂಸ್ಥೆಗಳು ತಾಲೂಕು ಸಂಯೋಜಕರುಗಳ ಮೂಲಕ ಫಲಾನುಭವಿಗಳಿಗೆ ಮುಂದಿನ ಕ್ರಮ ಕುರಿತು ಮಾಹಿತಿ ನೀಡಬೇಕು.
ಹಂಗಾಮುವಾರು ಬೆಳೆ ವಿಮೆ ಪರಿಹಾರ ಮೊತ್ತವನ್ನು ಯಾವುದೇ ವಿಳಂಬ ಮಾಡದೇ ಕಾಲಕಾಲಕ್ಕೆ ಸರಿಯಾಗಿ ಪಾವತಿಸಬೇಕೆಂದು ವಿಮಾ ಸಂಸ್ಥೆಗಳಿಗೆ ಸೂಚಿಸಿದರು. ಸಭೆಯಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ನಿರ್ದೇಶಕಿ ನಂದಿನಿಕುಮಾರಿ ಸೇರಿದಂತೆ ಕೃಷಿ ಇಲಾಖೆಯ ವಿಮಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.