ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಅಸ್ಸಾಂ ಮೂಲದ ಫೈಸಲ್ ಬಂಧಿತ ಆರೋಪಿ.
ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ಮಹಿಳೆಯರ ಪ್ರೊಫೈಲ್ ಹುಡುಕಿ ಫಾಲೋ ಮಾಡುತ್ತಿದ್ದ ಫೈಸಲ್, ನಂತರ ಅವರೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ಸ್ನೇಹ ಸಂಪಾದಿಸುತ್ತಿದ್ದ. ಬಳಿಕ ಅವರನ್ನು ಭೇಟಿಯಾಗಲು ಹೇಳಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. ಈ ವೇಳೆ ಮಹಿಳೆಯರಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದು, ನಂತರ ಆ ವಿಡಿಯೋವನ್ನು ತೋರಿಸಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದೇ ಹೋದಲ್ಲಿ ನಿಮ್ಮ ಗಂಡನಿಗೆ ವಿಡಿಯೋ ಕಳುಹಿಸುವುದಾಗಿ ಬೆದರಿಸುತ್ತಿದ್ದ.
ಇದೇ ರೀತಿ ಮಹಿಳೆಯೊಬ್ಬರನ್ನು ಬೆದರಿಸಿದ್ದ ಆರೋಪಿ ಅವರನ್ನು ಚೆನ್ನೈಗೆ ಬರುವಂತೆ ಕರೆದಿದ್ದಾನೆ. ಈ ಬಗ್ಗೆ ನೊಂದ ಮಹಿಳೆ ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೆನ್ನೈಗೆ ತೆರಳಿ ಆರೋಪಿ ಫೈಸಲ್ನನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವರಿಗೆ ವಂಚಿಸಿರುವ ಶಂಕೆಯಿದ್ದು, ಸದ್ಯ ಆತನ ವಿಚಾರಣೆ ಮುಂದುವರೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Server Hack: ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್, ಕೋಟ್ಯಂತರ ಹಣ ವಂಚನೆ; ಓರ್ವನ ಬಂಧನ
ಉದ್ಯೋಗ ಭರವಸೆ ನೀಡಿ ವಂಚನೆ: ಶಿವಮೊಗ್ಗ ಜಿಲ್ಲೆಯಲ್ಲೊಂದು ವಂಚನೆ ಪ್ರಕರಣ ವರದಿಯಾಗಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಮಲೆನಾಡಿನ ಮೂವರಿಗೆ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕು ಗವಟೂರು ನಿವಾಸಿ ಶ್ವೇತ ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ವಂಚನೆಗೊಳಗಾದ ಅರ್ಜುನ್, ನವೀನ್ ಮತ್ತು ಆದರ್ಶ ಎಂಬವರು, ಶ್ವೇತ ನಮ್ಮಿಂದ ಹಣ ಪಡೆದು ಕೆಲಸ ಕೊಡಿಸಿಲ್ಲ ಎಂದು ದೂರು ದಾಖಲಿಸಿದ್ದಾರೆ. ಶ್ವೇತಾ ಹೊಸನಗರ ತಾಲೂಕು ರಿಪ್ಪನ್ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹಾಗೂ ಸಣ್ಣ ಪ್ರಮಾಣದ ಗಾರ್ಮೆಂಟ್ಸ್ ನಡೆಸುತ್ತಿದ್ದಾರೆ. ಇವರು ನಿರುದ್ಯೋಗಿ ಅಮಾಯಕ ಯುವಕರನ್ನು ಪರಿಚಯಿಸಿಕೊಂಡು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವವರೆಗೂ ಆದರ್ಶ್ ಜೊತೆ ಫೋನ್ ಸಂಪರ್ಕದಲ್ಲಿದ್ದ ಶ್ವೇತ ಕೇಸು ದಾಖಲಾಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈಗ ಕಾಣೆಯಾಗಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಬೇಕು. ಈ ರೀತಿ ಬೇರೆ ಯಾರಿಗೂ ಮೋಸ ಆಗಬಾರದು ಎಂದು ವಂಚನೆಗೊಳಗಾದ ಮೂವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ವಂಚನೆ, ಮದುವೆ ಹೆಸರಲ್ಲಿ 3 ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ.. ಆರೋಪಿಗಳನ್ನು ಬಂಧಿಸಿದ ಪೊಲೀಸರು