ಬೆಂಗಳೂರು : ನಕಲಿ ಕೀ ಬಳಸಿ ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದು, ಅವರಿಂದ ಬರೋಬ್ಬರಿ 44 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ವರುಣ್ ಎಂಬುವರು ನೀಡಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ ಅಪ್ರಾಪ್ತರ ಕೈಚಳಕ ಬೆಳಕಿಗೆ ಬಂದಿದೆ. ಬಾಲಕರ ಬಂಧನದಿಂದ ಜೆ.ಪಿ.ನಗರ, ಜಯನಗರ, ಅವಲಹಳ್ಳಿ, ತಿಲಕ್ ನಗರ, ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ತಲಾ ಒಂದೊಂದು ಪ್ರಕರಣಗಳು ಹಾಗೂ ಬನಶಂಕರಿ, ಮೈಕೋ ಲೇಔಟ್, ಬೆಳ್ಳಂದೂರು, ಎಚ್ಎಸ್ಆರ್ ಪೊಲೀಸ್ ಠಾಣೆಗಳ ತಲಾ ಎರಡು ಪ್ರಕರಣಗಳು ಹಾಗೂ ಎಚ್ಎಎಲ್, ಕೆ.ಆರ್.ಪುರಂ ಪೊಲೀಸ್ ಠಾಣೆಗಳ ತಲಾ ಐದು ಪ್ರಕರಣಗಳು ಅಲ್ಲದೇ, ಕಾಡುಗೋಡಿ ಪೊಲೀಸ್ ಠಾಣೆಯ ಆರು ಪ್ರಕರಣಗಳು ಸೇರಿದಂತೆ ಒಟ್ಟು 29 ಪ್ರಕರಣಗಳು ಪತ್ತೆಯಾಗಿವೆ ಎಂದು ಜೆ.ಪಿ.ನಗರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಬಾಲಕರಿಂದ ಸುಜುಕಿ ಆಕ್ಸಿಸ್, ಹೊಂಡಾ ಡಿಯೋ, ಹೊಂಡಾ ಶೈನ್, ಹೊಂಡಾ ಆಕ್ಟಿವಾ, ಕೈನೆಟೆಕ್ ಹೊಂಡಾ ಸೇರಿದಂತೆ 44 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ದೆಹಲಿಗೆ ಪರಾರಿ ಯತ್ನ : ಪ್ರಕರಣ ದಾಖಲಾದ ಮೂರೇ ಗಂಟೆಯೊಳಗೆ ಆರೋಪಿಗಳು ಸೆರೆ
ಕಳ್ಳತನ ಮಾಡಿ ದೆಹಲಿಗೆ ಪರಾರಿಯಾಗಲು ಯತ್ನ: ಮಂಗಳೂರು ನಗರದ ಅತ್ತಾವರ ಬ್ರಿಜೇಶ್ ಅಪಾರ್ಟ್ಮೆಂಟ್ನ ಮನೆಯಲ್ಲಿ ಕಳ್ಳತನ ಮಾಡಿ ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದ ದೆಹಲಿ ಹಾಗೂ ಪಶ್ಚಿಮ ಬಂಗಾಳ ಮೂಲದ ಆರೋಪಿಗಳನ್ನು ಜೂನ್ 16 ರಂದು ಬಂಧಿಸಲಾಗಿದೆ. ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ದೆಹಲಿಯ ಜಹಂಗೀರ ಪುರಿಯ ನಿವಾಸಿ ಮೊಹಮ್ಮದ್ ಅಶೀಪ್ ಯಾನೆ ಆಶೀಷ್ (23), ಶೇಕ್ ಮೈದುಲ್ (25), ವಕೀಲ್ ಅಹಮ್ಮದ್ (34), ರಫೀಕ್ ಖಾನ್ (24) ಬಂಧಿತರು. ಇವರು ಜೂನ್ 15 ರಂದು ಮಧ್ಯಾಹ್ನ ಮಂಗಳೂರು ನಗರದ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಸಮೀಪದಲ್ಲಿರುವ ಬ್ರಿಜೇಶ್ ಅಪಾರ್ಟ್ಮೆಂಟ್ನ ಮನೆಯ ಬಾಗಿಲುಗಳನ್ನು ಮುರಿದು ಚಿನ್ನಾಭರಣ, ನಗದು ಹಣ ಸೇರಿ 4,45,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.
ಇದನ್ನೂ ಓದಿ : ಬೀಗ ಹಾಕಿದ ಮನೆಗಳೇ ಟಾರ್ಗೆಟ್ : ಮೂವರು ಮನೆಗಳ್ಳರ ಬಂಧಿಸಿದ ಮೈಸೂರು ಪೊಲೀಸರು
ಇನ್ನು ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗುತ್ತಿದ್ದ ಸ್ಟೀಲ್ ತುಂಬಿದ ವಾಹನ ತಡೆದು ಚಾಲಕನನ್ನು ಹತ್ಯೆ ಮಾಡಿದ ಬಳಿಕ ಸ್ಟೀಲ್ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಜೂನ್ 19 ರಂದು ಬಂಧಿಸಿದ್ದರು. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನನ್ನೂ ಆದಷ್ಟು ಬೇಗ ಬಂಧಿಸುವುದಾಗಿ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ. ಈ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಹಾವೇರಿಯಲ್ಲಿ ಲಾರಿ ಚಾಲಕನ ಕೊಲೆಗೈದು ಸ್ಟೀಲ್ ಕಳ್ಳತನ: ಐವರ ಬಂಧನ