ಬೆಂಗಳೂರು: ಪ್ರಿಯತಮೆ ಕೊಂದು ಬಂಧನ ಭೀತಿಯಿಂದ ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಜೀವನ್ ಭೀಮಾನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಪ್ರಿಯತಮೆ ಅಕಾಂಕ್ಷಳನ್ನು ಕೊಲೆ ಮಾಡಿದ ಆರೋಪದಡಿ ಹೈದರಾಬಾದ್ ಮೂಲದ ಅರ್ಪಿತ್ ಎಂಬಾತನನ್ನ ವೈಟ್ ಫೀಲ್ಡ್ ಬಳಿ ಬಂಧಿಸಿದ್ದಾರೆ. ಜೂ.5ರಂದು ಅಕಾಂಕ್ಷಳನ್ನ ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿ ಪತ್ತೆಗಾಗಿ ಜೀವನ್ ಭೀಮಾನಗರ ಠಾಣೆಯ ಇನ್ ಸ್ಪೆಕ್ಟರ್ ಬಿ.ರಾಜಣ್ಣ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳು ರಚಿಸಿ ದೆಹಲಿ, ಅಸ್ಸೋಂ ಹಾಗೂ ವಿಜಯವಾಡದಲ್ಲಿ ಸತತ ಶೋಧದ ಬಳಿಕ ಅಂತಿಮವಾಗಿ ನಗರದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಿಗೆ ತಿರುಗಿ ಲಿವಿಂಗ್ ಟೂ ಗೆದರ್ ಸಂಬಂಧ: ನಾಲ್ಕೈದು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದ ಆರೋಪಿ ಬೈಜ್ಯೂಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಅಕಾಂಕ್ಷಾ ಪರಿಚಯವಾಗಿ ಕ್ರಮೇಣ ಪ್ರೀತಿಗೆ ತಿರುಗಿ ಲಿವಿಂಗ್ ಟೂ ಗೆದರ್ ಸಂಬಂಧ ಇಟ್ಟುಕೊಂಡಿದ್ದರು. ಕೆಲ ತಿಂಗಳ ಬಳಿಕ ಅರ್ಪಿತ್ಗೆ ಕಂಪನಿಯು ಬಡ್ತಿ ನೀಡಿ ಹೈದರಾಬಾದ್ಗೆ ವರ್ಗಾವಣೆ ಮಾಡಿತ್ತು. ಈ ಮಧ್ಯೆ ಮೃತ ಯುವತಿಯು ಬೇರೆ ಹುಡುಗನೊಂದಿಗೆ ಓಡಾಡುತ್ತಿರುವ ಬಗ್ಗೆ ಗೊತ್ತಾಗಿದೆ.
ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳವಾಗುತಿತ್ತು. ತನ್ನ ಜೊತೆ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದ. ಒಲ್ಲೆ ಎಂದಿದ್ದ ಯುವತಿಯೊಂದಿಗೆ ಜಗಳ ತೆಗೆದಿದ್ದ. ಈಕೆಗೆ ಒಂದು ಗತಿ ಕಾಣಿಸಬೇಕೆಂದು ಹೈದರಾಬಾದ್ ನಿಂದ ಜೀವನ್ ಭೀಮಾನಗರದ ಕೋಡಿಹಳ್ಳಿಯಲ್ಲಿ ವಾಸವಾಗಿದ್ದ ಪ್ರಿಯತಮೆಯ ಪ್ಲ್ಯಾಟ್ ಗೆ ಜೂ.5ರಂದು ಬಂದಿದ್ದ. ಫ್ಲಾಟಿಗೆ ಬಂದವನೇ ಅಕಾಂಕ್ಷಾಳ ಜೊತೆ ಜಗಳ ತೆಗೆದು ಆಕೆಯನ್ನು ಕತ್ತುಹಿಸುಕಿ ಕೊಲೆ ಮಾಡಿದ್ದ.
ಹಲವು ಕಡೆಗಳಲ್ಲಿ ಸುತ್ತಾಡಿದ ಆರೋಪಿ: ನಂತರ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲು ಯತ್ನಿಸಿದ್ದ. ಆಗದಿದ್ದಾಗ ಶವವನ್ನ ಬಿಟ್ಟು ಪರಾರಿಯಾಗಿದ್ದ. ಇನ್ನೂ ನೆಟ್‌ವರ್ಕ್ ಆಧಾರದಲ್ಲಿ ಪೊಲೀಸರ ಕೈಗೆ ಲಾಕ್ ಆಗಬಹುದು ಎಂದು ಆರೋಪಿ ಅರ್ಪಿತ್ ಪ್ರೇಯಸಿ ಫ್ಲಾಟ್ ನಲ್ಲೇ ಮೊಬೈಲ್ ಬಿಟ್ಟು ಹೋಗಿದ್ದ. ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿ, ಸ್ವಲ್ಪ ದೂರ ಆಟೋ, ಸ್ವಲ್ಪ ದೂರ ಕಾಲ್ನಡಿಗೆ ಮೂಲಕ ಕೆ.ಆರ್. ಪುರ ಸಮೀಪದ ಬಿ.ನಾರಾಯಣಪುರದಿಂದ ನಾಪತ್ತೆಯಾಗಿದ್ದ.
ಅಕಾಂಕ್ಷಳ ಮತ್ತೋರ್ವ ರೂಮ್‌ಮೇಟ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಜೀವನ್ ಭೀಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭೀಮಾ ನಗರ ಠಾಣಾ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಯ ಕುಟುಂಬಸ್ಥರು, ಪರಿಚಿತರು, ಆಪ್ತರ ವಿಚಾರಣೆಯ ಬಳಿಕವೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿತನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಒಂದು ತಿಂಗಳ ಸತತ ಶೋಧದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ: ಕೊಲೆ ಮಾಡಿ ದೆಹಲಿ ರೈಲು ಹತ್ತಿದ್ದ ಆರೋಪಿ ಮಾರ್ಗ ಮಧ್ಯೆ ಅಸ್ಸೋಂನಲ್ಲಿ ಇಳಿದುಕೊಂಡಿದ್ದ. ಜೇಬಿನಲ್ಲಿದ್ದ ಹಣ ಖಾಲಿಯಾಗುತ್ತಿದ್ದಂತೆ ಚಿಂತಾಕ್ರಾಂತನಾಗಿದ್ದ. ಬ್ಯಾಂಕ್ನಲ್ಲಿ ಲಕ್ಷಾಂತರ ರೂಪಾಯಿ ಇದ್ದರೂ ಪೊಲೀಸರು ಬ್ಯಾಂಕ್ ಖಾತೆಯನ್ನ ಸೀಜ್ ಮಾಡಿದ್ದರು. ಅನಿವಾರ್ಯ ಕಾರಣದ ಹಿನ್ನೆಲೆಯಲ್ಲಿ ಕೂಲಿ ಕೆಲಸ ಮಾಡಿ ದಿನಕ್ಕೆ 150 ಸಂಪಾದನೆ ಮಾಡಿ ಅದರಿಂದ ನಿತ್ಯದ ಖರ್ಚುಗಳನ್ನ ಸರಿದೂಗಿಸುತ್ತಿದ್ದ. ಬಂಧನ ಭೀತಿಯಿಂದ ಪ್ರಿಯತಮೆ ಮನೆಯಲ್ಲೇ ಮೊಬೈಲ್ ಬಿಟ್ಟು ಹೋಗಿದ್ದರಿಂದ ಆರೋಪಿ ಪತ್ತೆ ಕಷ್ಟವಾಗಿತ್ತು.
ನೆರೆ ರಾಜ್ಯಗಳಿಗೆ ಪೊಲೀಸರು ಲುಕ್ ಔಟ್ ನೋಟಿಸ್ ಸಹ ಹೊರಡಿಸಿದ್ದರು. ಈ ಮಧ್ಯೆ ಹಣದ ವಿಚಾರಕ್ಕಾಗಿ ಸಂಬಂಧಿಕರೊಂದಿಗೆ ಸ್ಥಳೀಯರೊಬ್ಬರ ಮೊಬೈಲ್ ಮೆಸೇಜ್ ಮಾಡಿದ್ದನ್ನು ಟ್ರ್ಯಾಕ್ ಮಾಡಿದಾಗ ಆರೋಪಿಯು ಅಸ್ಸೋಂನಲ್ಲಿ ಅಡಗಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ತೆರಳುವಷ್ಟರಲ್ಲೇ ವಿಜಯವಾಡಕ್ಕೆ ಹೋಗಿದ್ದಾನೆ. ಸತತವಾಗಿ ಆತನನ್ನ ಹಿಂಬಾಲಿಸಿದ ತನಿಖಾ ತಂಡ ಕೊನೆಗೂ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: Bengaluru crime: ಗಂಡನಿಗೆ ಬೇರೆ ಯುವತಿಯೊಂದಿಗೆ ಸಂಬಂಧ ಇದೆ ಎಂದು ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ