ಬೆಂಗಳೂರು : ಐದು ನೂರರ ನೋಟುಗಳನ್ನು ನೀಡಿದರೆ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹೆಚ್ಚುವರಿ ನೀಡುವುದಾಗಿ 25 ಲಕ್ಷ ರೂ. ಪಡೆದು ವಂಚಿಸಿರುವ ಘಟನೆಯ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ವರದಿಯಾಗಿದೆ. ಸಿವಿಲ್ ಕಂಟ್ರ್ಯಾಕ್ಟರ್ ಆಗಿರುವ ಸುರೇಶ್ ಎಂಬುವವರು ನೀಡಿರುವ ದೂರಿನ ಮೇರೆಗೆ ಶಿವು, ಶಿವಕುಮಾರ ಸ್ವಾಮಿ, ಶ್ರೀನಿವಾಸ್ ಎಂಬಾತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ಸುರೇಶ್ ಅವರಿಗೆ ಎರಡು ತಿಂಗಳಿನ ಹಿಂದೆ ಕರೆ ಮಾಡಿದ್ದ ಶಿವು ಎಂಬಾತ, 'ಸದ್ಯದಲ್ಲೇ ಕೇಂದ್ರ ಸರ್ಕಾರವು ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟ್ಗಳನ್ನು ಬ್ಯಾನ್ ಮಾಡಲಿದೆ. ತಮ್ಮ ಬಳಿ ಕೋಟ್ಯಂತರ ರೂ. 2 ಸಾವಿರ ರೂ. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು 5 ನೂರು ರೂಪಾಯಿ ನೋಟುಗಳನ್ನಾಗಿ ಬದಲಾಯಿಸುತ್ತಿದ್ದೇವೆ. ನೀವು ನಮಗೆ 5 ನೂರರ ಮುಖಬೆಲೆಯ 25 ಲಕ್ಷ ರೂ. ಹಣ ನೀಡಿದರೆ ನಾವು ನಿಮಗೆ 2000 ಮುಖಬೆಲೆಯ 37.5 ಲಕ್ಷ ರೂಪಾಯಿ ನೀಡುತ್ತೇವೆ ಎಂದು ನಂಬಿಸಿದ್ದರು.
ಹೀಗಾಗಿ ಸುರೇಶ್ ನಂಬಿ ಆರೋಪಿಗಳ ಸೂಚನೆಯಂತೆ ಮೇ ತಿಂಗಳ ಅಂತ್ಯದಲ್ಲಿ ಹಣದ ಸಮೇತ ತಮ್ಮ ಸ್ನೇಹಿತನೊಂದಿಗೆ ಮಂತ್ರಾಲಯಕ್ಕೆ ಹೊರಡಲು ಸಿದ್ಧರಾಗಿದ್ದರು. ಆದರೆ ಅಷ್ಟರಲ್ಲಿ ಕರೆ ಮಾಡಿದ್ದ ಆರೋಪಿಗಳು ಮಂತ್ರಾಲಯ ಬೇಡ ನಾವು ತಿರುಪತಿಯಲ್ಲಿ ಇದ್ದೇವೆ, ಇಲ್ಲಿಯೇ ಬನ್ನಿ' ಎಂದು ಕರೆಸಿಕೊಂಡಿದ್ದಾರೆ. ತಿರುಪತಿಗೆ ತೆರಳಿದ ಬಳಿಕ ಅಲ್ಲಿಂದ ನೆಲ್ಲೂರಿಗೆ ಬರುವಂತೆ ಸೂಚಿಸಿ, 'ಅಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿ ನಿಮ್ಮನ್ನು ಭೇಟಿಯಾಗಲಿದ್ದಾನೆ' ಎಂದಿದ್ದರು. ಆರೋಪಿಗಳ ಸೂಚನೆಯಂತೆ ನೆಲ್ಲೂರಿಗೆ ತೆರಳಿದಾಗ ಆಟೋದಲ್ಲಿ ಬಂದು ಭೇಟಿಯಾಗಿದ್ದ ಶ್ರೀನಿವಾಸ್ ಎಂಬಾತ ಕಚೇರಿಗೆ ಕರೆದೊಯ್ದು ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದಾನೆ. ಬಳಿಕ 'ಎಲ್ಲವೂ ಒರಿಜಿನಲ್ ನೋಟು, ಯಾವ ಮೋಸವೂ ಇಲ್ಲ. ನೀವು ತಂದಿರುವ ಐದು ನೂರರ ನೋಟುಗಳನ್ನು ನೀಡಿ ಎಂದು ಕೇಳಿ ಪಡೆದುಕೊಂಡಿದ್ದಾನೆ.
ನಂತರ 'ನೀವು ಹೊರಗಡೆ ಕಾಯುತ್ತಿರಿ, ನಾವು ಬಂಡಲ್ ಮಾಡಿಕೊಂಡು ಬರುತ್ತೇವೆ' ಎಂದು ಸೂಚಿಸಿದ್ದಾನೆ. ನಂತರ ಹೊರಗಡೆ ಬಂದಿದ್ದ ಮತ್ತೋರ್ವ ವ್ಯಕ್ತಿ 'ನೀವು ಇಲ್ಲೇ ಇದ್ದರೆ ಯಾರಿಗಾದರೂ ಅನುಮಾನ ಬಂದು ಪೊಲೀಸರಿಗೆ ತಿಳಿಸುತ್ತಾರೆ. ಹಣವನ್ನು ನೆಲ್ಲೂರು ಟೋಲ್ ಬಳಿ ಕಲೆಕ್ಟ್ ಮಾಡಿಕೊಳ್ಳಿ' ಎಂದು ತಿಳಿಸಿದ್ದಾನೆ. ಆರೋಪಿಗಳು ಹೇಳಿದಂತೆ ಟೋಲ್ ಬಳಿ ಎಷ್ಟೇ ಹೊತ್ತು ಕಾದರೂ ಸಹ ಯಾರೂ ಬರದಿದ್ದಾಗ ಅನುಮಾನಗೊಂಡ ಸುರೇಶ್ ಆರೋಪಿ ಶಿವು ಮತ್ತು ಶಿವಕುಮಾರ್ ಸ್ವಾಮಿಗೆ ಕರೆ ಮಾಡಿದ್ದಾರೆ. ಆಗ ಆರೋಪಿಗಳು, 'ತಾವು ತಿರುಪತಿಯಲ್ಲಿ ಎರಡು ಸಾವಿರ ರೂ. ಮುಖಬೆಲೆಯ ಐದು ಕೋಟಿ ಹಣದ ಮತ್ತೊಂದು ವ್ಯವಹಾರದಲ್ಲಿದ್ದೇವೆ. ಇಲ್ಲಿಯೇ ಬನ್ನಿ' ಎಂದು ಲೈವ್ ಲೊಕೇಷನ್ ಸಹ ಶೇರ್ ಮಾಡಿದ್ದಾರೆ. ಇದನ್ನು ನಂಬಿದ್ದ ಸುರೇಶ್ ಹಾಗೂ ಅವರ ಸ್ನೇಹಿತ ತಿರುಪತಿಗೆ ತೆರಳಿ ಕರೆ ಮಾಡಿದ್ದಾರೆ. ಆಗಲೂ ಸಹ ಆರೋಪಿಗಳು 'ನಾವು ಬೆಂಗಳೂರಿಗೆ ತೆರಳಿದ್ದೇವೆ, ಅಲ್ಲಿಯೇ ನಿಮಗೆ ಹಣ ಕೊಡುತ್ತೇವೆ' ಎಂದಿದ್ದಾರೆ.
ಆದರೆ ಬೆಂಗಳೂರಿಗೆ ಬಂದು ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸದೇ ವಂಚಿಸಿದ್ದಾರೆ. ಈ ಘಟನೆ ನಡೆದು ಎರಡು ತಿಂಗಳು ಕಾದ ಬಳಿಕ ವಂಚನೆಗೊಳಗಾದ ಸುರೇಶ್ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸದ್ಯ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು: ಅಕ್ರಮವಾಗಿ ಪಿಸ್ತೂಲ್ನೊಂದಿಗೆ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ