ಬೆಂಗಳೂರು : ಖಾಸಗಿ ಕಂಪನಿಗೆ ನುಗ್ಗಿ ಎಂ.ಡಿ ಹಾಗೂ ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಆರೋಪಿಗಳಾದ ಫಿಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಎಂಬವರನ್ನು ಕುಣಿಗಲ್ ಸಮೀಪ ಬಂಧಿಸಿದೆ.
ಪ್ರಕರಣದ ವಿವರ: ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಕಂಪನಿ ಕಚೇರಿಗೆ ನುಗ್ಗಿದ್ದ ಫಿಲಿಕ್ಸ್ ಹಾಗೂ ಇತರರು ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನು ಕುಮಾರ್ ಅವರನ್ನು ಹತ್ಯೆ ಮಾಡಿದ್ದರು. ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ, ವಿನು ಕುಮಾರ್ ಹಾಗೂ ಆರೋಪಿ ಫಿಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಜೀ ನೆಟ್ ಎನ್ನುವ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಫಣೀಂದ್ರ ಸುಬ್ರಹ್ಮಣ್ಯಂ ಹಾಗೂ ವಿನು ಕುಮಾರ್ ಕಂಪನಿ ತೊರೆದಿದ್ದರು. 2022ರ ನವೆಂಬರ್ನಲ್ಲಿ ಅಮೃತಹಳ್ಳಿಯ ಪಂಪಾ ಲೇಔಟ್ನಲ್ಲಿ ತಮ್ಮದೇ ಇಂಟರ್ನೆಟ್ ಬ್ರಾಡ್ ಕಾಸ್ಟಿಂಗ್ ಎಂಬ ಹೊಸ ಕಂಪನಿ ಶುರು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಫಿಲಿಕ್ಸ್ನನ್ನು ಕಂಪನಿಯ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅದೇ ದ್ವೇಷಕ್ಕೆ ಫಿಲಿಕ್ಸ್, ಫಣೀಂದ್ರರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇನ್ನಿಬ್ಬರು ಆರೋಪಿಗಳಾದ ವಿನಯ್ ರೆಡ್ಡಿ ಹಾಗೂ ಶಿವುಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ, ಫಿಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು. ಆರೋಪಿಗಳು ಫಣೀಂದ್ರನನ್ನು ಕೊಲ್ಲಲು ಬಂದಾಗ ವಿನು ಕುಮಾರ್ನನ್ನು ಹತ್ಯೆ ಮಾಡುವ ಉದ್ದೇಶ ಅವರಿಗಿರಲಿಲ್ಲ. ಆದರೆ, ಫಣೀಂದ್ರನ ಹತ್ಯೆ ವೇಳೆ ತಡೆಯಲು ಬಂದ ವಿನು ಕುಮಾರ್ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ನಡೆದಿದ್ದೇನು?: ಗ್ರಾಹಕರ ವಿಚಾರವಾಗಿ ಫಣೀಂದ್ರ ಜೊತೆ ಮಾತನಾಡಲು ಮಂಗಳವಾರ ಸಂಜೆ 3:45ರ ಸುಮಾರಿಗೆ ಫಿಲಿಕ್ಸ್ ಹಾಗೂ ಇನ್ನಿಬ್ಬರು ಫಣೀಂದ್ರ ನಡೆಸುತ್ತಿದ್ದ ಕಂಪನಿಯ ಕಚೇರಿಗೆ ಬಂದಿದ್ದರು. ಫಣೀಂದ್ರ ಸುಬ್ರಹ್ಮಣ್ಯ ಕ್ಯಾಬಿನ್ನಲ್ಲಿ ಕುಳಿತು ಮಾತುಕತೆ ಆರಂಭಿಸಿದ್ದರು. ಈ ವೇಳೆ, ಆರೋಪಿಯು ಏಕಾಏಕಿ ಮಾರಕಾಸ್ತ್ರದಿಂದ ಫಣೀಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ವಿನು ಕುಮಾರ್ ಮೇಲೆಯೂ ಹಲ್ಲೆ ಮಾಡಿದ್ದಾನೆ. ಆ ಬಳಿಕ ಫಿಲಿಕ್ಸ್ ಹಾಗೂ ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕಂಪನಿಯ ಸಿಬ್ಬಂದಿ ಆಸ್ಪತ್ರೆಗೆ ರವಾನಿಸುವ ಯತ್ನಿಸಿದರೂ, ಇಬ್ಬರೂ ಸಾವನ್ನಪ್ಪಿದರು. ಘಟನೆಯ ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
ಆರೋಪಿಗಳ ಪತ್ತೆಗಾಗಿ ಈಶಾನ್ಯ ವಿಭಾಗದ ಪೊಲೀಸರ ಐದು ತಂಡ ರಚಿಸಲಾಗಿತ್ತು. ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಬೆನ್ನತ್ತಿದ ಪೊಲೀಸರು ಅಂತಿಮವಾಗಿ ಕುಣಿಗಲ್ ಬಳಿ ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ