ಬೆಂಗಳೂರು: ವಾರಾಂತ್ಯದಲ್ಲಿ ಮೋಜು- ಮಸ್ತಿಯ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ತಡರಾತ್ರಿ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಶಾಕ್ ಟ್ರೀಟ್‌ಮೆಂಟ್ ನೀಡಿದ್ದಾರೆ. ಓರ್ವ ಡಿಸಿಪಿ, ಇಬ್ಬರು ಎಸಿಪಿ, ಆರು ಜನ ಇನ್ಸ್‌ಪೆಕ್ಟರ್, ಹತ್ತು ಪಿಎಸ್ಐ, 20 ಪುರುಷ ಹಾಗೂ ಮಹಿಳಾ ಪೊಲೀಸ್ ತಂಡ ತಡರಾತ್ರಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿದೆ. ಈ ವೇಳೆ 20ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿದೇಶಿ ಪ್ರಜೆಗಳ ಹೈಡ್ರಾಮಾ: ಪೊಲೀಸರ ಕಾರ್ಯಾಚರಣೆ ವೇಳೆ ಕೆಲವು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಒಂದಿಷ್ಟು ಮಂದಿ ಹೈಡ್ರಾಮಾ ನಡೆಸಿರುವ ಪ್ರಸಂಗವೂ ನಡೆದಿದೆ. ವಶಕ್ಕೆ ಪಡೆಯುವ ಯತ್ನದಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಕೆಲವು ವಿದೇಶಿ ಪ್ರಜೆಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ವೇಶ್ಯಾವಾಟಿಕೆ, ಮಾದಕ ದಂಧೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ 25ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಐವರು ವಿದೇಶಿ ಪ್ರಜೆಗಳಸಹಿತ ಒಟ್ಟು ಆರು ಜನ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ. ಇಬ್ಬರು ವಿದೇಶಿ ಪ್ರಜೆಗಳು ವೀಸಾ ಅವಧಿ ಅಂತ್ಯವಾದ ನಂತರವೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಕೂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಬಸ್ ಅಪಘಾತ: 15 ಮಂದಿ ಪ್ರಯಾಣಿಕರಿಗೆ ಗಾಯ
ಕಳ್ಳರ ಬಂಧನ: ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದ ಆರೋಪಿಗಳಾದ ಚೆನ್ನೈ ಮೂಲದ ಕಾರ್ತಿಕ್ (37), ಅನುಮೋದಾಸ್ (44) ಶನಿವಾರ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ಬಲೆ ಬಿದ್ದಿದ್ದಾರೆ. ಬಂಧಿತ ಖದೀಮರು ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಕಾರಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದವರನ್ನು ಗಮನಿಸಿ, ಅವರನ್ನು ಹಿಂಬಾಲಿಸಿ ಬಳಿಕ ಹಣ ಎಗರಿಸಿ ಪರಾರಿಯಾಗುತ್ತಿದ್ದರು. ಹೀಗೆ ರಾಜರಾಜೇಶ್ವರಿ ನಗರದಲ್ಲಿ ಇತ್ತೀಚೆಗೆ ಇನೋವಾ ಕಾರಿನಲ್ಲಿದ್ದ ವ್ಯಕ್ತಿಗೆ ಯಾಮಾರಿಸಿ 15 ಲಕ್ಷ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ರಾಜರಾಜೇಶ್ವರಿ ಠಾಣೆ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಜೊತೆಗೆ ಬಂಧಿತರಿಂದ 13.97 ಲಕ್ಷ ನಗದು, ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶ ಪಡಿಸಿಕೊಂಡಿದ್ದರು.
ಬೆಂಗಳೂರಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಹಾಡಹಗಲೇ ಖದೀಮರು ಕೈಚಳಕ ತೋರಿಸುತ್ತಿದ್ದಾರೆ. ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಸೇರಿ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ಘಟನೆ ನಡೆದಿತ್ತು. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸರ ಗಮನಕ್ಕೆ ತರಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಬಸ್ ಅಪಘಾತ: 15 ಮಂದಿ ಪ್ರಯಾಣಿಕರಿಗೆ ಗಾಯ