ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ, ಕಳೆದ ಮೂರು ದಿನಗಳ ಹಿಂದೆ ಮಡಿವಾಳದ ರೌಡಿಶೀಟರ್ ಕಪಿಲ್ ಎಂಬವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ. ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನ ದೇವರಜೀವನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ನನ್ನು ಎರಡು ಸ್ಕೂಟರ್ನಲ್ಲಿ ಹಿಂಬಲಿಸಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು.
ನವೀನ್ ಕುಮಾರ್, ರಾಹುಲ್, ಪುನೀತ್ ಕುಮಾರ್, ಪವನ್ ಕುಮಾರ್ ಹಾಗೂ ಶಂಕರ್ ಬಂಧಿತ ಆರೋಪಿಗಳು. ಆರೋಪಿಗಳೆಲ್ಲರೂ ಆರ್.ಟಿ.ನಗರ ಹಾಗೂ ಹೆಬ್ಬಾಳ ನಿವಾಸಿಗಳಾಗಿದ್ದಾರೆ. ಪ್ರಕರಣದ ಪ್ರಮುಖ ಸೂತ್ರದಾರಿ ಸೇರಿದಂತೆ ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ರೌಡಿಶೀಟರ್ ಆಗಿದ್ದ ಕಪಿಲ್ ಮೇಲೆ ಕೊಲೆಯತ್ನ ಸೇರಿದಂತೆ ಐದು ಪ್ರಕರಣ ದಾಖಲಾಗಿದ್ದವು. ಈತನನ್ನು 2014ರಲ್ಲಿ ನಡೆದ ಕೊಲೆ ಕೇಸ್‌ನಲ್ಲಿ ಬಂಧಿಸಿದ್ದ ಮಡಿವಾಳ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಲ ವರ್ಷಗಳಿಂದ ಆರ್.ಟಿ.ನಗರದಲ್ಲಿ ವಾಸವಾಗಿದ್ದ ಕಪಿಲ್, ಹೆಬ್ಬಾಳ, ಆರ್.ಟಿ.ನಗರ, ಗೋವಿಂದಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ. ಈತನ ವಿರೋಧಿ ಬಣದವರು ಕೊಲೆ ಮಾಡಲು ಮೂರು - ನಾಲ್ಕು ದಿನಗಳಿಂದ ಕಪಿಲ್ನ ಚಲನವಲನ ಗಮನಿಸಿ ಜು.11ರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳೆ ದ್ವೇಷವೇ ರೌಡಿಶೀಟರ್ನ ಹತ್ಯೆಗೆ ಕಾರಣ: ಆರೋಪಿಗಳಾದ ನವೀನ್ ಹಾಗೂ ರೋಹಿತ್ನನ್ನು ಮೃತ ಕಪಿಲ್ ನಡುರಸ್ತೆಯಲ್ಲಿ ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಬೈದು ಅವಮಾನ ಮಾಡಿದ್ದ. ಇದಕ್ಕೆ ಪ್ರತೀಕಾರ ತಿರಿಸಿಕೊಳ್ಳಲು ನವೀನ್ ಮತ್ತು ರೋಹಿತ್ ಕಾಯುತ್ತಿದ್ದರು. ಅಲ್ಲದೇ ಕಪಿಲ್, ಪವನ್ ಕುಮಾರ್ ಹಾಗೂ ಶಂಕರ್ ಎಂಬುವವರ ಜೊತೆಯಲ್ಲಿಯೂ ಕಿರಿಕ್ ಮಾಡಿಕೊಂಡಿದ್ದ. ಇದೇ ವಿರೋಧಿ ಗ್ಯಾಂಗ್ ಸದಸ್ಯರನ್ನು ಒಗ್ಗೂಡಿಸಿಕೊಂಡು ಆರೋಪಿಗಳಿಗೆ ಹಣ ನೀಡಿ ಸುಪಾರಿ ನೀಡಿದ್ದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಗೂ ಮೃತ ಕಪಿಲ್ಗೂ ಯಾವ ರೀತಿ ದ್ವೇಷವಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆತನ ಬಂಧನದ ಬಳಿಕವಷ್ಟೇ ಸತ್ಯ ಹೊರಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರ ಪೂರ್ವ ವಿಭಾಗದಲ್ಲಿನ ಕೆಲ ಪ್ರದೇಶಗಳನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹಪಾಹಪಿಸುತ್ತಿದ್ದ ಕಪಿಲ್ನನ್ನು ವ್ಯವಸ್ಥಿತವಾಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ. ವಿರೋಧಿ ಗ್ಯಾಂಗ್ ಒಗ್ಗೂಡಿಸಿ ಸುಮಾರು ಮೂರರಿಂದ ಆರು ಲಕ್ಷದವರೆಗೂ ಸುಪಾರಿ ನೀಡಿರುವ ಪ್ರಮುಖ ಆರೋಪಿಯೂ, ಬಂಧಿತ ಆರೋಪಿಗಳು ಜೈಲಿನಲ್ಲಿರುವಷ್ಟು ದಿನ ಪ್ರತಿ ತಿಂಗಳಿಗೆ 5 ಸಾವಿರ ನೀಡುವುದಾಗಿ ಭರವಸೆ ನೀಡಿದ್ದ. ಕೊಲೆಗೆ ನಾನಾ ಕಾರಣಗಳಿದ್ದು ಪ್ರತಿಯೊಂದು ಆಯಾಮದಲ್ಲಿಯೂ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ಹಿಂದೆ ಆ್ಯಕ್ಟೀವ್ ಆಗಿರುವ ರೌಡಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ: ಮೈಮೇಲಿದ್ದ ಚಿನ್ನ, ಫೋನ್ ಪೇಯಿಂದ ಹಣ ಎಗರಿಸಿ ಎಸ್ಕೇಪ್