ಬೆಂಗಳೂರು: ಪ್ರೇಯಸಿಯೇ ಪ್ರಿಯಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೋಗೇಶ್ ಇರಿತಕ್ಕೊಳಗಾದ ಯುವಕ. ಆರೋಪಿ ಮಹಿಳೆ ಬರೂತಿಯನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಸ್ಸಾಂ ಜೋಡಿ : ಅಸ್ಸಾಂ ಮೂಲದವರಾದ ಜೋಗೇಶ್ ಮತ್ತು ಮಹಿಳೆ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಮಹಿಳೆ ಡೇ ಕೇರ್ನಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಜೋಗೇಶ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈ ಮೊದಲೇ ಒಂದು ಮದುವೆಯಾಗಿ ಗಂಡನಿಂದ ಮಹಿಳೆ ದೂರಾಗಿದ್ದಳು. ಆ ಬಳಿಕ ಜೋಗೇಶ್ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರೂ ಸಹ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಪ್ರೇಯಸಿಯ ಬಳಿ ಯುವಕ ಸಾಕಷ್ಟು ಹಣ ಪಡೆದುಕೊಂಡಿದ್ದ. ಇತ್ತೀಚಿಗೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ. ಪ್ರಿಯಕರನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಜಗಳ ತೆಗೆದಿದ್ದಾಳೆ. ಈ ಜಗಳ ಅತಿರೇಕಕ್ಕೆ ಹೋದ ವೇಳೆ ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಾಳೆ.
ಪರಾರಿ ಯತ್ನ: "ಪ್ರಿಯಕರನಿಗೆ ಚಾಕು ಇರಿದ ಮಹಿಳೆ ಪರಾರಿಯಾಗಲು ಯತ್ನಿಸಿದ್ದಳು. ಆದರೆ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ಘಟನೆಯಲ್ಲಿ ಪ್ರಿಯಕರ ಜೋಗೇಶ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪತಿಯನ್ನು ಪ್ರಿಯಕರನಿಂದ ಕೊಲ್ಲಿಸಿ ಮಿಸ್ಸಿಂಗ್ ಕೇಸು ದಾಖಲಿಸಿದ ಪತ್ನಿ, ಇಬ್ಬರ ಬಂಧನ
ಬೆಂಗಳೂರಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಅಪರಾಧ ಪ್ರಕರಣ: ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿ ಪತಿಗೆ ಪತ್ನಿ ಸ್ಕೆಚ್ ಹಾಕಿರುವ ಪ್ರಕರಣವೊಂದು ಇತ್ತೀಚೆಗೆ ನಗರ ಸರ್ಜಾಪುರದಲ್ಲಿ ಬೆಳಕಿಗೆ ಬಂದಿತ್ತು. ಮೂರು ತಿಂಗಳ ಹಿಂದೆಯೇ ಪ್ರಿಯಕರನ ಮೂಲಕ ರಸ್ತೆ ಅಪಘಾತದಲ್ಲಿ ಪತಿಯನ್ನು ಹತ್ಯೆಗೈದು, ಬಳಿಕ ಮುಸ್ಸಿಂಗ್ ಕೇಸ್ ದಾಖಲಿಸಿದ್ದ ಪತ್ನಿ ಕೃತ್ಯ ಇತ್ತೀಚೆಗೆ ಬಯಲಾಗಿತ್ತು. ಆಂಧ್ರಪ್ರದೇಶದ ಅಣ್ಣಾಮಲೈ ಜಿಲ್ಲೆಯ ಚಿತ್ತೂರು ತಾಲೂಕಿನ ಬೊಮ್ಮಿರೆಡ್ಡಿ ಪಾಳ್ಯ ಮೂಲದ ಪವನ್ ಕುಮಾರ್ (37) ಎಂಬಾತನನ್ನು ಆತನ ಪತ್ನಿ ಪಾರ್ವತಿ ಕೊಲೆ ಮಾಡಿಸಿದ್ದಳು. ಪ್ರಕರಣದಲ್ಲಿ ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
18 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪವನ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಪಾರ್ವತಿ ಕೂಲಿ ಕೆಲಸ ಮಾಡುತ್ತಿದ್ದಳು. ತರಕಾರಿ ವಾಹನ ಚಾಲಕ ಜೊತೆ ಪತ್ನಿಗೆ ಸಂಪರ್ಕ ಇರುವ ಬಗ್ಗೆ ಶಂಕಿಸಿ ಗಂಡ ಜಗಳ ಮಾಡಿದ್ದ. ಬಳಿಕ ಹೆಂಡತಿ ತವರು ಮನೆಗೆ ತೆರಳಿದ್ದಳು. ಆದರೂ ಗಂಡ ಆಗಾಗ ಕಿರುಕುಳ ನೀಡುತ್ತಿದ್ದರಿಂದ ಗೆಳೆಯನಿಗೆ ಕರೆ ಮಾಡಿ ಸ್ಕೆಚ್ ಹಾಕಿದ್ದಳು. ಅದರಂತೆ ಯಲ್ಲಪ್ಪ ಎಂಬಾತ ಪವನ್ ಕುಮಾರ್ನನ್ನು ಹತ್ಯೆ ಮಾಡಿ ಬಳಿಕ ಅಪಘಾತದಂತೆ ಬಿಂಬಿಸಿ ಎಸ್ಕೇಪ್ ಆಗಿದ್ದ. ಬಳಿಕ ಪತ್ನಿ ಸರ್ಜಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಲ್ಲಪ್ಪ ಮತ್ತು ಪಾರ್ವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಂಬಿಸಿ ಗರ್ಭಿಣಿಯನ್ನಾಗಿಸಿದ ಆರೋಪ: ಅತ್ತೆ ಮಗನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ