ಬೆಂಗಳೂರು: ಮಾಜಿ ಪ್ರಿಯತಮೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಸಂಬಂಧದಲ್ಲಿದ್ದು, ನಂತರ ದೂರವಾಗಿರುವ ಮಾಜಿ ಪ್ರೇಯಸಿ ವಿರುದ್ಧ ಅವರು ಈ ಆರೋಪ ಮಾಡಿದ್ದಾರೆ. ಮಾಜಿ ಪ್ರೇಯಸಿ ಕೂಡ ಕೆ ಸಿ ಕಾರಿಯಪ್ಪ ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಗೆ ಪ್ರತಿ ದೂರು ಸಲ್ಲಿಸಿದ್ದಾರೆ.
ಕೆ ಸಿ ಕಾರಿಯಪ್ಪ ದೂರಿನ ವಿವರ: "ಒಂದೂವರೆ ವರ್ಷದ ಹಿಂದೆ ಮಾಜಿ ಪ್ರೇಯಸಿಯ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸಲಾರಂಭಿಸಿದ್ದೆವು. ಆಕೆ ಮದ್ಯವ್ಯಸನಿ. ಅನೇಕ ಬಾರಿ ಬುದ್ಧಿವಾದ ಹೇಳಿದರೂ ಕೇಳದೇ ಇದ್ದಾಗ ಒಂದು ವರ್ಷದ ಹಿಂದೆ ನಮ್ಮ ನಡುವೆ ಬ್ರೇಕಪ್ ಆಗಿತ್ತು. ಆ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಿದ್ದೆ. ನಂತರದ ದಿನಗಳಲ್ಲಿ 'ನಿನ್ನ ಕ್ರಿಕೆಟ್ ಜೀವನ ಅಂತ್ಯಗೊಳಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ವಿರುದ್ಧ ಬರೆಯುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ' ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು. ಇವೆಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದರೂ ಡಿಸೆಂಬರ್ 22ರಂದು ಬಗಲಗುಂಟೆಯ ರಾಮಯ್ಯ ಲೇಔಟ್‌ನಲ್ಲಿರುವ ತಮ್ಮ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಪೋಷಕರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ" ಎಂದು ಕೆ ಸಿ ಕಾರಿಯಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಪ್ರೇಯಸಿಯ ಪ್ರತಿ ದೂರು: "ನಾನು ಮತ್ತು ಕಾರಿಯಪ್ಪ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು. ಇಬ್ಬರು ಒಂದೇ ಸಮುದಾಯದವರು. ಸಂಬಂಧದಲ್ಲಿದ್ದಾಗ ಇಬ್ಬರ ನಡುವೆ ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ಬೆಳೆದು ನಾನು ಗರ್ಭ ಧರಿಸಿದ್ದೆ. ನಂತರ ನನಗೆ ಗರ್ಭಪಾತ ಮಾತ್ರೆ ನೀಡಿದ್ದರು. ನಾನು 'ನನಗೆ ಮಗು ಬೇಕು' ಎಂದಾಗಲೂ ಬಲವಂತವಾಗಿ ಐದು ದಿನಗಳ ಕಾಲ ಮಾತ್ರೆ ನೀಡಿದ್ದರು. ಆ ನಂತರ ಗೋಲ್ಡನ್ ಫಾರ್ಮ್ ರೆಸಾರ್ಟ್ಗೆ ಹೋಗಿದ್ದೆವು. ಒಂದು ವಾರದ ಬಳಿಕ ಗರ್ಭಪಾತವೂ ಆಯಿತು. ಈ ಕುರಿತಾಗಿ ನಾನು ಹಿಂದೆಯೇ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಕೆ ಸಿ ಕಾರಿಯಪ್ಪ ಅವರ ಮನವಿ ಮೇರೆಗೆ ದೂರು ವಾಪಸ್ ಪಡೆದುಕೊಂಡಿದ್ದೆ. ಇಬ್ಬರೂ ಮದುವೆಯಾಗೋಣ ಎಂದು ನಂಬಿಸಿದ್ದ ಕಾರಿಯಪ್ಪ, ನನ್ನಿಂದ ಹಂತಹಂತವಾಗಿ 2 ಲಕ್ಷ ರೂ. ಹಣ ಪಡೆದುಕೊಂಡರು. ನಂತರದಲ್ಲಿ ಅವರ ಪೋಷಕರು "ನೀನು ವಿಚ್ಛೇದಿತೆ. ನಮ್ಮ ಮಗನನ್ನು ಮದುವೆಯಾಗಬೇಡ" ಎಂದು ಅವಾಚ್ಯವಾಗಿ ನಿಂದಿಸಿದರು. ಡಿಸೆಂಬರ್ 18ರಂದು ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ಬಂದಿದ್ದ ಕಾರಿಯಪ್ಪ "ನೀನು ಈಗಾಗಲೇ ಡಿವೋರ್ಸ್ ಆದವಳು. ನಿನ್ನನ್ನು ಕಂಡರೆ ನನಗಿಷ್ಟವಿಲ್ಲ. ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ" ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ".
"ಎಫ್ಐಆರ್ ದಾಖಲಿಸಿದ ಎರಡು ದಿನಗಳ ಬಳಿಕ ಮತ್ತೆ ಸಂಪರ್ಕಕ್ಕೆ ಬಂದರು. ಆ ನಂತರವೂ ಬಂದು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಮಾಡೆಲಿಂಗ್ ಮಾಡೋದು ಏಕೆ? ಹುಡುಗರ ಜೊತೆ ಹೋಗುವುದು ಯಾಕೆ? ಎಂದೆಲ್ಲ ಕಿರುಕುಳ ನೀಡಲು ಆರಂಭಿಸಿದ್ದರು. ಒಂದು ಸಲ ಇಬ್ಬರ ಪೋಷಕರ ಭೇಟಿಯಾಯಿತು. ನೀವೇ ಮದುವೆ ಮಾಡಿಕೊಡಬೇಕು ಎಂದು ಹೇಳಿದ್ದಕ್ಕೆ, 2BHK ಫ್ಲಾಟ್ ಬೇಕು ಎಂದು ಬೇಡಿಕೆ ಇಟ್ಟರು. ಆ ನಂತರ ಗುಜರಾತ್ ಅಸೋಸಿಯೇಷನ್‌ಗೆ ಕರೆದುಕೊಂಡು ಹೋಗಿದ್ದಾಗ ನನ್ನನ್ನು ಹೆಂಡತಿ ಎಂದೇ ಎಲ್ಲರಿಗೂ ಪರಿಚಯಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಮೋಸ ಮಾಡಿದರು" ಎಂಬುದು ಮಾಜಿ ಪ್ರೇಯಸಿ ಆರೋಪ.
ಇದೀಗ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆ ಸಿ ಕಾರಿಯಪ್ಪ ಪ್ರಸ್ತುತ ಮಿಜೋರಾಂ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸುತ್ತಿದ್ದ ಅವರು, ಈ ಬಾರಿಯ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬಿಕರಿಯಾಗಿಲ್ಲ.
ಇದನ್ನೂ ಓದಿ: ಮಹಿಳಾ ಟೆಕ್ಕಿಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿದ ಮಾಜಿ ಪ್ರಿಯಕರ