ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆ ಉದ್ಯೋಗಿ ನೀಡಿದ ದೂರಿನ ಮೇರೆಗೆ ನಾಲ್ವರು ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಗರದ ಎನ್.ಆರ್ ಕಾಲೋನಿಯ ರಾಜ್ ಸಿಂಗ್ ಭುಟೋರಿಯಾ ನೀಡಿದ್ದ ದೂರಿನ ಮೇರೆಗೆ ಜೆಪಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಪಿ.ವಿಕ್ರಮ್, ಆರ್.ಪ್ರಕಾಶ್, ಆರ್.ರಾಧಾಕೃಷ್ಣ ಹಾಗೂ ಆರ್.ಸುರೇಶ್ ವಿರುದ್ಧ ಐಪಿಸಿ ಸೆಕ್ಷನ್ 323, 420, 504, 506 ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿತರು ಜೆಪಿ ನಗರ, ಜಯನಗರ, ಬಿಟಿಎಂ ಲೇಔಟ್ಗಳಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ. ಹಾಗೆಯೇ ಸರ್ಕಾರಿ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ನೂರಾರು ಕೋಟಿ ಬೇನಾಮಿ ಆಸ್ತಿ ಹೊಂದಿದ್ದು, ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಪ್ರಶ್ನಿಸಿದ್ದಕ್ಕೆ ತಮಗೆ ಅವ್ಯಾವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ, ಕಿರುಕುಳ, ಹಲ್ಲೆ ಮಾಡಿದ್ದಾರೆ. ಜತೆಗೆ ಇಡೀ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಜ್ ಸಿಂಗ್ ದೂರು ನೀಡಿದ್ದರು. ಆದರೆ ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ 2019ರ ನವೆಂಬರ್ 18ರಂದು ರಾಷ್ಟ್ರಪತಿಗಳಿಗೆ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಪತ್ರದ ಮೂಲಕ ದೂರು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಷ್ಟ್ರಪತಿ ಕಚೇರಿ ದೂರಿನ ಸಂಬಂಧ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ 2020ರ ಜನವರಿ 31, ಮೇ 27, ಜುಲೈ 21ರಂದು ಮೂರು ಬಾರಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅರ್ಜಿದಾರರ ದೂರಿನ ಸಂಬಂಧ ಕ್ರಮ ಜರುಗಿಸುವಂತೆ ಸೂಚಿಸಿತ್ತು. ಆದರೆ ಪೊಲೀಸ್ ಆಯುಕ್ತರು ಉತ್ತರಿಸದೆ ಇದ್ದುದರಿಂದ ಆಯೋಗ 2020ರ ಸೆಪ್ಟೆಂಬರ್ 10ರಂದು ಮತ್ತೊಂದು ಪತ್ರ ಬರೆದು ಆಯುಕ್ತರಿಗೆ ಎಚ್ಚರಿಕೆ ನೀಡಿತ್ತು.
ದೂರುದಾರರ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ ಮುಂದಿನ 10 ದಿನಗಳಲ್ಲಿ ವರದಿ ನೀಡದಿದ್ದರೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ-1992ರ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ ಸಿಂಗ್ ಅವರಿಂದ ದೂರು ಪಡೆದು ಎಫ್ಐಆರ್ ದಾಖಲಿಸಿದ್ದಾರೆ.