ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಸರ್ಕಸ್ ನಡೆಸುತ್ತಿರುವ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಪಕ್ಷದ ಸಂಘಟನಾ ಪ್ರಮುಖರ ಜೊತೆ ಮಾತುಕತೆ ನಡೆಸಿ ಗಮನ ಸೆಳೆದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ ನೀಡಿದರು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಬಿ.ಎಲ್.ಸಂತೋಷ್ ಭೇಟಿ ಮಾಡಿದ್ದ ಯೋಗೇಶ್ವರ್ ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂತೋಷ್ ಸೂಚಿಸಿದ್ದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸದ್ಯ ಬೊಮ್ಮಾಯಿ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿದ್ದು, ಅವುಗಳ ಭರ್ತಿ ವೇಳೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಬಿಎಸ್ವೈ ರಾಜೀನಾಮೆ ವಿಚಾರದಲ್ಲಿ ರೆಬೆಲ್ ಬಣದ ಸದಸ್ಯರು ಎಂದು ಗುರುತಿಸಿಕೊಂಡಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹಾಗೂ ಸಿಪಿ ಯೋಗೇಶ್ವರ್ ಮೂರೂ ಜನಕ್ಕೂ ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಈ ಮೂವರೂ ಸಂಪುಟ ಸೇರುವ ಯತ್ನದಲ್ಲಿದ್ದು, ಇದರಲ್ಲಿ ಸಿಪಿ ಯೋಗೇಶ್ವರ್ ಮುಂಚೂಣಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಿಷ್ಠ ಆಗಬೇಕಾದಲ್ಲಿ ನನಗೆ ಸಂಪುಟದಲ್ಲಿ ಅವಕಾಶ ಕೊಡುವಂತೆ ಸಿಎಂಗೆ ನಿರ್ದೇಶನ ನೀಡಿ ಎಂದು ಸಂಘಟನಾ ಪ್ರಮುಖರನ್ನು ಕೇಳಿದ್ದಾರೆ ಎನ್ನಲಾಗಿದೆ.
ಓದಿ: ರಾಜ್ಯದಲ್ಲಿರುವ ಅಫ್ಘಾನ್ ಪ್ರಜೆಗಳ ರಕ್ಷಣೆಗೆ ಸರ್ಕಾರ, ಪೊಲೀಸ್ ಇಲಾಖೆ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ