ದೇವನಹಳ್ಳಿ (ಬೆಂಗಳೂರು): ದೆಹಲಿಗೆ ತೆರಳಿದ್ದರೆನ್ನಲಾದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೀಶ್ವರ್ ಬೆಂಗಳೂರಿಗೆ ಹಿಂದಿರುಗಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ನಗರಕ್ಕೆ ಆಗಮಿಸಿದ ಬೆನ್ನಲ್ಲೇ ಯೋಗೀಶ್ವರ್ ಬಂದಿದ್ದಾರೆ. ಅವರ ಬಳಿಯೇ ಹೋಗಿ ತಮ್ಮ ಅಹವಾಲು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಸಭೆಗೆ ತಡವಾಗಿ ಬರುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ರಾ ಎಂಬ ಚರ್ಚೆ ನಡೆಯುತ್ತಿದೆ.
ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿ.ಪಿ. ಯೊಗೇಶ್ವರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ದೆಹಲಿಗೆ ಹೋಗಿಲ್ಲ, ವೈಯಕ್ತಿಕ ಕಾರಣಗಳಿಂದ ಹೈದರಾಬಾದ್ಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯವಾಗಿ ಏನು ಮಾತನಾಡಲ್ಲ, ಅರುಣ್ ಸಿಂಗ್ ಬಂದಿದ್ದಾರೆ, ಅಲ್ಲೇ ಹೋಗಿ ನನ್ನ ಅಹವಾಲು ಬಗ್ಗೆ ಮಾತನಾಡುತ್ತೇನೆ. ಮೂರು ದಿನಗಳಲ್ಲಿ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಬಗೆಹರಿಯುವ ಬಗ್ಗೆ ಪ್ರತಿಕ್ರಿಯಿಸಿ ರಾಜ್ಯ ಉಸ್ತುವಾರಿಯನ್ನ ಭೇಟಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಅಸಮಾಧಾನದ ಸಂದೇಶ?
ಭಿನ್ನರ ಬಣದಲ್ಲಿ ಗುರುತಿಸಿಕೊಂಡು ಸರ್ಕಾರದ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಸಚಿವ ಯೋಗೀಶ್ವರ್ ರಾಜ್ಯ ಉಸ್ತುವಾರಿ ಕರೆದಿದ್ದ ಸಭೆಗೆ ತಡವಾಗಿ ಆಗಮಿಸುವ ಮೂಲಕ ತಮಗೆ ಅಸಮಾಧಾನ ಇದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರಾ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಸಚಿವರ ಸಭೆ ಕರೆಯಲಾಗಿತ್ತು. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಗಾಗಿ ಕಾದು ಕುಳಿತಿದ್ದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಹಾಗು 30 ಸಚಿವರು ಸಕಾಲಕ್ಕೆ ಆಗಮಿಸಿದ್ದರು. ಆದರೆ ಸಿ.ಪಿ ಯೋಗೀಶ್ವರ್ ಮಾತ್ರ ಆಗಮಿಸಲಿಲ್ಲ, ಅವರ ನಿರೀಕ್ಷೆಯಲ್ಲಿ ಸ್ವಲ್ಪ ಸಮಯ ಕಾದು ನೋಡಿದ ನಾಯಕರು ನಂತರ 5.30 ಕ್ಕೆ ಸಭೆ ಆರಂಭಿಸಿದರು.
ಸಭೆ ಆರಂಭಗೊಂಡ ನಂತರ 1 ಗಂಟೆ ತಡವಾಗಿ ಸಂಜೆ 6.30 ಕ್ಕೆ ಮಲ್ಲೇಶ್ವರಂ ಕಚೇರಿಗೆ ಯೋಗೀಶ್ವರ್ ಆಗಮಿಸಿದರು. ತಡವಾಗಿಯೇ ಸಭೆಯಲ್ಲಿ ಭಾಗಿಯಾದರು. ಈಗಾಗಲೇ ಭಿನ್ನ ರೀತಿಯ ಹೇಳಿಕೆ ಮೂಲಕ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಅವರು, ತಡವಾಗಿ ಸಭೆಗೆ ಆಗಮಿಸುವ ಮೂಲಕ ಅಸಮಾಧಾನದ ಸಂದೇಶ ರವಾನಿಸಿದ್ರು ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಕ್ಷಮದಲ್ಲಿ ನೇರವಾಗಿ ಬಿಎಸ್ವೈ ವಿರುದ್ಧ ಹೇಳಿಕೆ ನೀಡಲು ಸಾಧ್ಯವಿಲ್ಲ, ನಾಯಕತ್ವದ ವಿರುದ್ಧ ಮಾತನಾಡಲೂ ಸಾಧ್ಯವಿಲ್ಲ. ಹಾಗಾಗಿ ತಡವಾಗಿ ಸಭೆಗೆ ಆಗಮಿಸುವ ಮೂಲಕ ತಮಗೆ ಅಸಮಾಧಾನ ಇದೆ ಎನ್ನುವುದನ್ನು ತೋರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಓದಿ: ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ; ಸಚಿವ ಯೋಗೇಶ್ವರ್ ಗೈರು